ಬೆಂಗಳೂರು: ಮಹಾಮಾರಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಕಳೆದ ದಿನ ಬರೋಬ್ಬರಿ 1,267 ಮಂದಿಗೆ ಸೋಂಕು ದೃಢವಾಗಿದೆ. ಈ ಕೊರೊನಾ ಸಮಯದಲ್ಲೇ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ಹೋರಾಟ ಮಾಡಲು ಮುಂದಾಗಿದ್ದಾರೆ.
ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಪತ್ರ ನೀಡುವ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತು AIUTUC (ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್) ವತಿಯಿಂದ ಹೋರಾಟ ಮಾಡಲಿದ್ದು, ತಮ್ಮ ಬೇಡಿಕೆಗಳನ್ನ ಇಡೇರಿಸದಿದ್ದರೆ 42 ಸಾವಿರ ಆಶಾ ಕಾರ್ಯಕರ್ತೆಯರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ.
ಇದೇ ತಿಂಗಳು 30ಕ್ಕೆ ಅಂದರೆ ಮಂಗಳವಾರವೇ ರಾಜ್ಯಾದ್ಯಂತ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಹೋರಾಟ ಮಾಡಲಿದ್ದಾರೆ. ನಂತರ ಜುಲೈ 10ರೊಳಗೆ ಬೇಡಿಕೆ ಇಡೇರದಿದ್ದರೆ ರಾಜ್ಯಾದ್ಯಂತ ಕಾರ್ಯಕರ್ತೆಯರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು:
1) 12 ಸಾವಿರ ವೇತನವನ್ನ ನಿಗದಿ ಮಾಡಬೇಕು
2) ಈ ಹಿಂದಿನ ಬಾಕಿ ವೇತನವನ್ನ ನೀಡಬೇಕು
3) ಸರ್ವೆ, ಹೆರಿಗೆ ಹೀಗೆ ಇನ್ನಿತರ ಕೆಲಸಗಳಿಗೆ ಹೆಚ್ಚುವರಿ ಹಣ ನೀಡಲಾಗುತ್ತಿತ್ತು. ಇದನ್ನ ಇಗ ನಿಲ್ಲಿಸಲಾಗಿದೆ. ಈ ವೇತನವನ್ನೂ ನೀಡಬೇಕು
4) ಕೊರೊನಾ ಟೈಮಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ನೀಡಬೇಕು. ಹೀಗೆ ಕೆಲ ಬೇಡಿಕೆಗಳನ್ನ ಇಡೇರಿಸುವಂತೆ ಒತ್ತಾಯ
ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆಶಾ ಕಾರ್ಯಕರ್ತೆರು ಹೋರಾಟ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಆಶಾ ಕಾರ್ಯಕರ್ತೆರು ಸರ್ಕಾರಕ್ಕೆ ಸಾಮೂಹಿಕ ರಾಜೀನಾಮೆಯ ವಾರ್ನಿಂಗ್ ನೀಡಿದ್ದಾರೆ.