ಬೆಂಗಳೂರು, ಏ.26- ಕೊರೋನ ವೈರಾಣು ಹರಡುವುದನ್ನು ತಡೆಯಲು ರಾಜ್ಯದಲ್ಲಿ ಲಾಕ್ ಡೌನ್ ಮಾಡಿದ ಪರಿಣಾಮ ಬೆಂಗಳೂರಿನಲ್ಲಿ ಅಂತರ್ಜಲದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಗೃಹ ಬಳಕೆ ನೀರಿನ ಪ್ರಮಾಣ ಹೆಚ್ಚಾಗಿದ್ದರೆ, ವಾಣಿಜ್ಯ ಬಳಕೆ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ.
ಬೆಂಗಳೂರಿನಲ್ಲಿ 2.1 ಮೀಟರ್ ನಿಂದ 90 ಮೀಟರ್ ವರೆಗೂ ಅಂತರ್ಜಲ ಹೆಚ್ಚಳವಾಗಿರುವುದು ಕಂಡುಬಂದಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್. ಪ್ರಕಾಶ್ ಈ ಸಂಜೆಗೆ ತಿಳಿಸಿದರು.
ಲಾಕ್‌ಡೌನ್ ನಿಂದಾಗಿ ಜನರು ಮನೆಯಲ್ಲೇ ಇದ್ದಿದ್ದರಿಂದ ಶೇಕಡ 25ರಷ್ಟು ಹೆಚ್ಚು ನೀರು ಬಳಸಿದ್ದಾರೆ. ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಲಾಕ್ ಡೌನ್ ಅವಧಿಯಲ್ಲಿ ಕಾರ್ಯ ನಿರ್ವಹಿಸದಿರುವುದರಿಂದ ನೀರಿನ ಬಳಕೆ ಪ್ರಮಾಣ ಕಡಿಮೆಯಾಗಿದೆ.
ಇದರಿಂದ ಪ್ರತಿ ದಿನ ನಿರಂತರವಾಗಿ ಚಾಲನೆಯಲ್ಲಿದ್ದ ಕೊಳವೆ ಬಾವಿಗಳ ಯಂತ್ರಗಳು ಸ್ಥಗಿತವಾಗಿದ್ದವು. ಅಲ್ಲದೆ, ಕಡಿಮೆ ಪ್ರಮಾಣದ ನೀರನ್ನು ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳು ಬಳಸಿವೆ. ಹೀಗಾಗಿ ಕೊಳವೆ ಬಾವಿಗಳಲ್ಲಿನ ನೀರಿನ ಮಟ್ಟ ನಿರಂತರವಾಗಿ ಏರಿಕೆ ಆಗಿರುವುದನ್ನು ಗಮನಿಸಲಾಗಿದೆ.
ಎಚ್ಎಸ್ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಂತರ್ಜಲ ಮಟ್ಟ ಹೆಚ್ಅಗಿರುವುದು ಕಂಡುಬಂದಿದೆ.ತಾವು ಕೆಲವು ಕೊಳವೆ ಬಾವಿಗಳ ನೀರಿನ ಮಟ್ಟವನ್ನು ನಿರಂತರವಾಗಿ ನಿರ್ವಹಣೆ (ಮಾಪನ) ಮಾಡುತ್ತಿರುವುದರಿಂದ ಈ ಅಂಶ ಗೊತ್ತಾಗಿದೆ ಎಂದು ಹೇಳಿದರು.
ಸು.400-500 ಅಡಿ ಆಳದಲ್ಲಿ ಅಂರ್ತಜಲವಿದ್ದ ಕೊಳವೆ ಬಾವಿಗಳಲ್ಲಿ ಈಗ 50 ಅಡಿಗಳಲ್ಲೇ ನೀರು ಇದೆ. ಕಳೆದ ಮಾರ್ಚ್ 22 ರಿಂದ ಏ.25 ರ ನಡುವಿನ ಅವಧಿಯಲ್ಲಿನ ಕೊಳವೆ ಬಾವಿಗಳ ನಿರ್ವಹಣೆಯಿಂದ ಅಂರ್ತಜಲದ ನೀರಿನ ಮಟ್ಟ ಏರಿಕೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.