ಬೆಂಗಳೂರು: 2020-21 ನೇ ಸಾಲಿನ ಶೈಕ್ಷಣಿಕ ವರ್ಷ ಹತ್ತಿರ ಬರುತ್ತಿದ್ದು ಕೋವಿಡ್ 19 ಸೋಂಕು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಯ ಅವಧಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ ಬೋರ್ಡ್ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ, ಖಾಸಗಿ ಅನುದಾನಿತ ಶಾಲೆಗಳಿಗೆ ಅನ್ವಯ ಆಗುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ಶಾಲೆಗಳು ಯಾವಾಗದಿಂದ ಆರಂಭವಾಗಲಿದೆ ಎನ್ನುವುದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಶಾಲೆಗಳು ಆರಂಭಗೊಳ್ಳುವ ಸಾಧ್ಯತೆಯಿದೆ.
ಸುತ್ತೋಲೆಯಲ್ಲಿ ಏನಿದೆ?
1. ಶಾಲಾ ತರಗತಿ ಕೊಠಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
2. ಒಂದು ಡೆಸ್ಕ್ ನಲ್ಲಿ 3 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಮಾಡುವುದು.
3. ಕೊಠಡಿಗಳು ಕೊರತೆಯಾದರೆ ಗ್ರಂಥಾಲಯ, ಕ್ರೀಡಾ ಕೊಠಡಿ, ಗಣಕ ಯಂತ್ರ ಕೊಠಡಿ ಬಳಸಿಕೊಳ್ಳುವುದು.
4. ಜನ ವಸತಿ ಪ್ರದೇಶದಲ್ಲಿ ಲಭ್ಯವಿರುವ ಸಮುದಾಯ ಭವನ, ಅಂಗನವಾಡಿ, ಸರ್ಕಾರಿ ಕಟ್ಟಡಗಳನ್ನು ಬಳಸಿಕೊಳ್ಳುವುದು.
5. ಶಾಲೆಯನ್ನ ಎರಡು ಪಾಳಿ ಅವಧಿಯಲ್ಲಿ ನಡೆಸುವುದು. ಮೊದಲ ಪಾಳಿ ಬೆಳಗ್ಗೆ – 7.50 ರಿಂದ 12.20ರವರೆಗೆ, ಎರಡನೇ ಪಾಳಿ – 12.10 ರಿಂದ 5 ಗಂಟೆಯವರೆಗೆ. ರಡು ಪಾಳಿಗಳಿಗೆ ಅಗತ್ಯವಾಗಿ ವೇಳಾಪಟ್ಟಿ ರೂಪಿಸಿಕೊಳ್ಳುವುದು.
6. ಖಾಸಗಿ ಶಾಲೆಗಳು ಮಕ್ಕಳನ್ನು ವಾಹನಗಳಲ್ಲಿ ಕರೆ ತರುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
7. ಸಾಮೂಹಿಕ ಪ್ರಾರ್ಥನೆ ಮಾಡುವಾಗಿ ಕಡ್ಡಾಯವಾಗಿ ಮಕ್ಕಳು ಮಾಸ್ಕ್ ಧರಿಸುವುದು.
8. ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡುವುದು. ಆಗಾಗ ವಿದ್ಯಾರ್ಥಿಗಳು ಕೈ ತೊಳೆಯುವಂತೆ ಅಗತ್ಯ ಕ್ರಮವಹಿಸುವುದು.
9. ಊಟದ ಸಮಯ, ಆಟದ ಸಮಯದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
10. ಶಾಲೆಗಳಲ್ಲಿ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ ಅಡಿ ಬೆಳಗಿನ ಪಾಳಿಯಲ್ಲಿ ಬರೋ ವಿದ್ಯಾರ್ಥಿಗಳಿಗೆ ನೀಡಬೇಕು. ಮಧ್ಯಾಹ್ನದ ಪಾಳಿಯಲ್ಲಿ ಬರೋ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಹಾಲಿನ ಪುಡಿ ಕೊಡುವ ವ್ಯವಸ್ಥೆ ಮಾಡುವುದು.