ಇದೇ ಮೊದಲ ಬಾರಿಗೆ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು-ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್) ವತಿಯಿಂದ ‘ಬಯೋಗ್ಯಾಸ್’ ಘಟಕ ಆರಂಭಿಸುವ ಯೋಜನೆ ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ 150 ಹಾಲು ಉತ್ಪಾದಕ ಸೊಸೈಟಿ ವ್ಯಾಪ್ತಿಯಲ್ಲಿ ಆರಂಭಿಸಲಾಗುವುದು ಎಂದು ಬೆಮುಲ್ ಅಧ್ಯಕ್ಷರಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಉತ್ಪಾದಕರು ಮತ್ತು ರೈತರುನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಹಸಿಕಸ ಮತ್ತು ಪ್ರಾಣಿಗಳ ತ್ಯಾಜ್ಯ ಬಳಸಿಕೊಂಡು ಬಯೋಗ್ಯಾಸ ಘಟಕ ಆರಂಭಿಸುವುದು. ಇದರಿಂದ ಗುಣಮಟ್ಟದ ಸಾವಯವ ಗೊಬ್ಬರವನ್ನು ಉತ್ಪಾದಿಸುವುದು ಹಾಗೂ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಹೀಗಾಗಿ ಒಕ್ಕೂಟದ ಸಹಯೋಗದಲ್ಲಿಯೇ ಘಟಕ ಆರಂಭಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಒಕ್ಕೂಟವುಗಳಿಸಿರುವ 12.59 ಕೋಟಿ ರೂ. ಲಾಭವನ್ನು ಮರಳಿ ರೈತರಿಗೆ, ಹಾಲು ಉತ್ಪಾದನಕರಿಗೆ ನೀಡುವ ಉದ್ದೇಶದಿಂದ ಡೈರಿ ಕಟ್ಟಡಗಳ ನಿರ್ಮಾಣ, ಮೇವು ಕತ್ತರಿಸುವ ಯಂತ್ರ, ಪಿಎಂಸಿ ನಿರ್ವಹಣೆಗೆ 50 ಲಕ್ಷ ರೂ. ಹಸು, ಎಮ್ಮೆಗಳಿಗೆ ವಿಮೆ ಸೌಲಭ್ಯ ಹೀಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.ಆದರೆ, ಹೈನುಗಾರರು ಹಸುವಿನ ಹಾಲವನ್ನು ಬೆಮುಲ್‌ಗೆ ನೀಡಿ ಎಮ್ಮೆ ಹಾಲನ್ನು ಖಾಸಗಿ ಡೈರಿಗಳಿಗೆ ನೀಡುತ್ತಿರುವುದು ಸರಿಯಲ್ಲ. ಎಮ್ಮೆ ಹಾಲು ನೀಡದಿದ್ದರೆ ಮಾರ್ಕೆಟ್‌ನಲ್ಲಿ ಸ್ಪರ್ಧೆ ಮಾಡುವುದು ಕಷ್ಟವಾಗಲಿದೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕಾದರೆ ಎಲ್ಲರೂ ಎಮ್ಮೆ ಹಾಲನ್ನು ಬೆಮುಲ್‌ಗೆ ನೀಡಬೇಕು ಎಂದು ಹೇಳಿದರು.
ಪ್ರಸ್ತುತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1,100 ಹಾಲು ಉತ್ಪಾದಕರ ಸಹಕಾರ ಸಂಘ ವ್ಯಾಪ್ತಿಯಲ್ಲಿ ಪ್ರತಿದಿನ 2.75 ಲಕ್ಷ ಲೀಟರ್ ಹಾಲು ಶೇಖರಿಸಲಾಗುತ್ತಿದೆ. ಇದನ್ನು 3 ಲಕ್ಷಕ್ಕೆ ಹೆಚ್ಚಿಸುವ ಸಂಕಲ್ಪ ಮಾಡಲಾಗಿದ್ದು, ಎಲ್ಲರೂ ಕೈಜೋಡಿಸಬೇಕು. ಆಂಧ್ರಪ್ರದೇಶ ರಾಜ್ಯಕ್ಕೆ ಪ್ರತಿ ತಿಂಗಳು 3 ಲಕ್ಷ ಲೀಟರ್ ಹಾಲನ್ನು ಬೆಮುಲ್ ಮೂಲಕ ಕಳುಹಿಸುತ್ತಿದ್ದೇವೆ. ಇದೀಗ ನಮ್ಮ ಹಾಲನ್ನು ಸ್ಥಗೀತಗೊಳಿಸಿ ಬೆಂಗಳೂರಿನ ಕೆಎಂಎಫ್‌ನವರು ಆಂಧ್ರಪ್ರದೇಶಕ್ಕೆ ಹಾಲು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಡೈರಿಗಳ ಸ್ಪರ್ಧೆಯನ್ನು ಎದುರಿಸಿ ಬೆಮುಲ್ ಬೆಳಸಬೇಕಾಗಿದೆ ಎಂದರು.
ಸದ್ಯ ಜಿಲ್ಲೆಯ ಬೆಮುಲ್ ವ್ಯಾಪ್ತಿಯಲ್ಲಿ ಅಂದಾಜು 35 ಸಾವಿರ ಹಾಲು ಉತ್ಪಾದಕ ರೈತರಿದ್ದು, ಅವರಿಗೆಲ್ಲಾ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅಕಾಲಿಕ ಮರಣ ಹೊಂದುವ ಹಾಲು ಉತ್ಪಾದಕ ರೈತರಿಗೆ 60 ಸಾವಿರ ರೂ. ವರೆಗೆ ಪರಿಹಾರ ನೀಡಲಾಗುತ್ತಿದೆ. ವಿಮಾ ಕಂಪನಿಗಳು 70 ವರ್ಷ ಮೇಲ್ಪಟ್ಟವರಿಗೆ ವಿಮೆ ಸೌಲಭ್ಯ ಕೊಡಲು ಒಪ್ಪದಿರುವ ಹಿನ್ನೆಲೆ ರೈತರ ಹೆಸರಿನಲ್ಲಿ ವಿಮೆ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ ಜಾರಕಿಹೊಳಿ, ಬೆಮುಲ್ ನಿರ್ದೇಶಕರಾದ ಶಂಕರ ಇಟ್ನಾಳ್, ಅಜೀತ್ ದೇಸಾಯಿ, ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆನ್ನವರ, ಡಾ.ಬಸವರಾಜ ಪರವನ್ನವರ, ವಿರೂಪಾಕ್ಷಿ ಐತಿ, ಬಾಬುರಾವ್ ವಾಘಮೋಡೆ, ರಾಯಪ್ಪ ಡೂಗ್, ಶ್ರೀಶೈಲಪ್ಪ ಶಿಂತ್ರೆ, ಪ್ರಕಾಶ ಅಂಬೋಜಿ, ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್. ಇತರರಿದ್ದರು.
19 ಎಕರೆ ಖರೀದಿಗೆ ಪ್ರಸ್ತಾವನೆ
ಕಿತ್ತೂರು ಕರ್ನಾಟಕ ಭಾಗದ ಜನರು ಬಹುದಿನಗಳಿಂದ ಬೇಡಿಕೆಯಾಗಿ ಉಳಿದಿರುವ ಮೇಘಾ ಡೈರಿ ಸ್ಥಾಪನೆ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ. ಪಶುಸಂಗೋಪನೆ ಇಲಾಖೆ ಒಡೆತನದ 25 ಎಕರೆ ಜಮೀನು ಗುತ್ತಿಗೆ ಬದಲಾಗಿ 19 ಎಕರೆ ಖರೀದಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ವಂತ ಜಾಗದಲ್ಲಿಯೇ ಡೈಲ ಆರಂಭಿಸಬೇಕು ಎಂಬುದು ಒಕ್ಕೂಟದ ನಿರ್ಣಯವಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
Laxmi News 24×7