Breaking News
Home / Uncategorized / ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು…

ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು…

Spread the love

ಬೆಳಗಾವಿ: ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋವಿಡ್-19 ಸೋಂಕಿನಿಂದ ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಮನೆ ಮನೆಗೆ ತೆರಳಿ ಸಮೀಕ್ಷೆ ಕೈಗೊಂಡು ಉಸಿರಾಟದ ತೊಂದರೆ, ಜ್ವರ ಮತ್ತಿತರ ಸೋಂಕಿನ ಲಕ್ಷಣಗಳು ಇರುವ ಹಿರಿಯ ನಾಗರಿಕರನ್ನು ಗುರುತಿಸಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

  ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,    ವೈದ್ಯಕೀಯ ಸೌಲಭ್ಯ ದೊರಕುವುದರಿಂದ ರಕ್ತದೊತ್ತಡ, ಮಧುಮೇಹ, ಹೃದಯ ಹಾಗೂ ಕಿಡ್ನಿ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಇಂತಹ ಜನರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವ ಬಗ್ಗೆ ಕ್ರಮಕೈಗೊಳ್ಳಬೇಕು.


ಖಾಸಗಿ ಆಸ್ಪತ್ರೆ ಆರಂಭಿಸಲು ಕ್ರಮಕ್ಕೆ ಸೂಚನೆ:

 ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಸೂಕ್ತ ಮುಂಜಾಗ್ರತೆಯ ಜತೆಗೆ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯ ನೀಡಬೇಕು.
ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸದಂತೆ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಸೂಚನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

 ಕೋವಿಡ್-19 ಸೋಂಕು ಇಲ್ಲದಿರುವವರು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ಕಾರ್ಯಾಗಾರ ಆಯೋಜಿಸುವ ಮೂಲಕ ಕೋವಿಡ್-19 ಹೊರತುಪಡಿಸಿ ಇತರೆ ಪ್ರಕರಣಗಳ ನಿರ್ಹಣೆಯ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಮನೆ ಮನೆ ಆರೋಗ್ಯ ಸಮೀಕ್ಷೆ ನಡೆಸುವ ಮೂಲಕ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮಾಹಿತಿಯನ್ನು ಕಲೆಹಾಕಬೇಕು ಎಂದು ತಿಳಿಸಿದರು.

ಕೋವಿಡ್-19 ಸಕ್ರಿಯ ಪ್ರಕರಣಗಳ ನಿರ್ವಹಣೆ, ಕಂಟೈನ್ಮೆಂಟ್ ಝೋನ್ ಹಾಗೂ ಕ್ವಾರಂಟೈನ್ ಕೇಂದ್ರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಬಿಮ್ಸ್ ಪ್ರಯೋಗಾಲಯ ಆರಂಭಿಸಲು ಸೂಚನೆ:

 ಬಿಮ್ಸ್ ಆಸ್ಪತ್ರೆಯಲ್ಲೂ ಗಂಟಲು ದ್ರವದ ಮಾದರಿ ಪರೀಕ್ಷಿಸಲು ಕೂಡಲೇ ಪ್ರಯೋಗಾಲಯ ಆರಂಭಿಸುವಂತೆ ಅತೀಕ್ ಸೂಚನೆ ನೀಡಿದರು.

ಜಿಲ್ಲೆಯ ಮಳೆ-ಬೆಳೆಯ ಪ್ರಮಾಣ ಮತ್ತು ಬೀಜ, ಗೊಬ್ಬರ ಪೂರೈಕೆ ಬಗ್ಗೆ ಕೃಷಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಕಳೆದ ಬಾರಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವವರಿಗೆ ಪರಿಹಾರ ವಿತರಣೆ ಮತ್ತು ಮನೆಗಳ ನಿರ್ಮಾಣದ ಕುರಿತು ಚರ್ಚಿಸಿದರು.

  ಸರ್ಕಾರದ ಮಾರ್ಗಸೂಚಿ ಪ್ರಕಾರ ಸೋಂಕಿತರ ಗಂಟಲು ದ್ರವ ಮಾದರಿಗಳನ್ನು ಮತ್ತೆ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಒತ್ತಡಗಳಿಲ್ಲ. ಆದ್ದರಿಂದ ವರದಿ ಬೇಗ ಲಭಿಸುತ್ತಿವೆ ಎಂದು ಜಿಲ್ಲೆಯ ವಿಶೇಷ ಕೋವಿಡ್-19 ನಿಯಂತ್ರಣಾಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದರು.
    ಹೋಮ್ ಕ್ವಾರಂಟೈನ್ ಮಾರ್ಗಸೂಚಿ ಉಲ್ಲಂಘಿಸುವವರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗುತ್ತಿದೆ. ಅಂತಹವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಕಳಿಸಲು ಪರಿಶೀಲಿಸಲಾಗುವುದು ಎಂದರು.

    ಅದೇ ರೀತಿ ಜಿಲ್ಲೆಯ ಕೋವಿಡ್-19 ನಿಗದಿತ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕ್ವಾರಂಟೈನ್ ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ:
    ಕ್ವಾರಂಟೈನ್ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
    45 ಸಕ್ರಿಯ ಕಂಟೈನ್ಮೆಂಟ್ ಝೋನ್ ಗಳಿವೆ. ಸದ್ಯಕ್ಕೆ ಸಕ್ರಿಯ ಪ್ರಕರಣಗಳ ಪೈಕಿ ಯಾರೂ ವೆಂಟಿಲೇಟರ್ ನಲ್ಲಿ ಇಲ್ಲ. ಕೋವಿಡ್-19 ಸೋಂಕು ಹೊರತುಪಡಿಸಿ ಇತರರಿಗೆ ವೈದ್ಯಕೀಯ ಸೌಲಭ್ಯ ನೀಡುವಂತೆ ಈಗಾಗಲೇ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯ ನೀಡದ ಆಸ್ಪತ್ರೆ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್,  ಬೆಳಗಾವಿ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ದೂರು ದಾಖಲು!

Spread the loveಶಿವಮೊಗ್ಗ : ರಾಜ್ಯ ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ