ಬೆಳಗಾವಿ: ಪ್ರಸಕ್ತ ಕೊರೋನಾ ಸಂಕಷ್ಟದದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯಿಂದ ನಡೆದುಕೊಳ್ಳಬೇಕು.ಮನುಷ್ಯತ್ವ ,ಮಾನವೀಯತೆ ಬಿಟ್ಟವರು ಮನುಷ್ಯರೇ ಅಲ್ಲ ಎಂದು ಹಿರಿಯ ರಂಗಕರ್ಮಿ ಶ್ರೀ ಬಿ.ಎಸ್.ಗವಿಮಠ ಅವರು ಇಂದಿಲ್ಲಿ ಹೇಳಿದರು.ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು
ಮೂವತ್ತು ಸಂಗೀತ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಖ್ಯಾತ ಕವಿ ಸಿದ್ದಯ್ಯ ಪುರಾಣಿಕರ ” ಏನಾದರೂ ಆಗು ಮೊದಲು ಮಾನವನಾಗು” ಎಂಬ ಕವಿವಾಣಿಯನ್ನು ಉಲ್ಲೇಖಿಸಿದ ಗವಿಮಠ ಅವರು,ನಾವು ದಾನ ಮಾಡಿದೆವು ಅವರು ದಾನ ಮಾಡಿದರು ಎಂಬ ಮಾತೆಲ್ಲ
ಸುಳ್ಳು .ಎಲ್ಲವೂ ಮೇಲಿರುವ ಪರಮಾತ್ಮನಿಗೇ ಸೇರಿದ್ದು ಎಂದು ಹೇಳಿ,ಕಳೆದ ಎರಡು ತಿಂಗಳಿಂದ ” ಹಸಿದವರತ್ತ ನಮ್ಮ ಚಿತ್ತ” ಅಭಿಯಾನ ನಡೆಸಿಕೊಂಡು ಬಂದಿರುವ ಕ್ರಿಯಾ ಸಮಿತಿಯ ಸೇವೆ ಸಾಮಾನ್ಯ ಸಂಗತಿಯಲ್ಲ.ಇದೊಂದು ದಾಖಲೆಯಾಗಿ ಉಳಿಯಲಿದೆ ಎಂದರು.
ಹಿರಿಯ ಸಾಹಿತಿ ಶ್ರೀ ಶಿರೀಶ ಜೋಶಿ ಅವರು ಮಾತನಾಡಿ,ಸಂಗೀತ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ ಅವರಿಗೆ ಆಹಾರ ಧಾನ್ಯಒದಗಿಸಿದ್ದು ರಾಜ್ಯದಲ್ಲಿಯೇ ಇದೇ ಮೊದಲನೆಯದಾಗಿದೆ ಎಂದರು.
ಇಂದು ರಂಗ ಹಾಗೂ ಸಂಗೀತ ಕಲಾವಿದರು ನಿಜವಾಗಿಯೂ ಸಂಕಷ್ಟದಲ್ಲಿ ಇದ್ದಾರೆ.ಅವರಿಗೆ ಪರಿಹಾರ ರೂಪದಲ್ಲಿ ಸರಕಾರ ನೆರವಿಗೆ ಬರಬೇಕು ಎಂದು ಜೋಶಿ
ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕು.ವಿದ್ಯಾವತಿ ಭಜಂತ್ರಿ ಅವರು ಮಾತನಾಡಿ, ಸಾಹಿತಿಗಳಿಗೆ ಮತ್ತು ಕಲಾವಿದರಿಗೆ ಆರ್ಥಿಕ ಪರಿಹಾರ ಒದಗಿಸಲು ರಾಜ್ಯ ಸರಕಾರ ಈಗಾಗಲೇ ಕ್ರಮ ಕೈಕೊಂಡಿದೆ.ಸರಕಾರದ ಆದೇಶದಂತೆ ಕಲಾವಿದರ,ಸಾಹಿತಿಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ಎರಡು ತಿಂಗಳಿಂದ ನಡೆದಿರುವ ಅಭಿಯಾನವು ಇನ್ನೂ ಮುಂದುವರೆಯಲಿದ್ದು ಹೆಚ್ಚೆಚ್ಚು ದಾನಿಗಳು ಮುಂದೆ ಬರಬೇಕೆಂದು ಮನವಿ ಮಾಡಿದರು.
ಕ್ರಿಯಾ ಸಮಿತಿಯ ಸಾಗರ್ ಬೋರಗಲ್ಲ,ಹರೀಶ ಕರಿಗೊಣ್ಣವರ,ವೀರೇಂದ್ರ ಗೋಬರಿ
ಮುಂತಾದವರಿದ್ದರು.
ಆರಂಭದಲ್ಲಿ ಅಶೋಕ ಚಂದರಗಿ ಸ್ವಾಗತಿಸಿದರು.ಕೊನೆಗೆ ಖ್ಯಾತ ಗಾಯಕ ಸುರೇಶ ಚಂದರಗಿ ಆಭಾರ ಮನ್ನಿಸಿದರು.