Breaking News

NEETಗಿಂತ KPSC ಹಗರಣಕ್ಕೆ ಉತ್ತರ ಕೊಡಿ: ಲೋಕಸಭೆಯಲ್ಲಿ ಡಿಕೆಶಿಗೆ ತೇಜಸ್ವಿ ಪ್ರಶ್ನೆ

Spread the love

ನವದೆಹಲಿ: ಮುಖ್ಯಮಂತ್ರಿಗಳು ದೆಹಲಿಗೆ ಬಂದು NEET ಹಗರಣದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆದರೆ KPSC ಹಗರಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರ ನೋವು ಮುಖ್ಯಮಂತ್ರಿಗಳಿಗೆ ಕಾಣುತ್ತಿಲ್ಲವೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ  ಪ್ರಶ್ನಿಸಿದರು.

ಲೋಕಸಭೆಯಲ್ಲಿ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ತಡೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಮುಖ್ಯಮಂತ್ರಿಗಳಿಗೆ ಕನ್ನಡದಲ್ಲೇ ಪ್ರಶ್ನಿಸಿದ ಅವರು, ʼ10 ದಿನಗಳ ಹಿಂದೆ KPSC ಅಧ್ಯಕ್ಷರನ್ನು ಅಮಾನತು ಮಾಡಲಾಗಿದೆ. ತಮ್ಮ ಮಕ್ಕಳಿಗೆ ನಕಲಿ ದಾಖಲೆಗಳನ್ನು ಮಾಡಿಸಿರುವ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ವೆಟರ್ನರಿ ಕಾಲೇಜಿನಲ್ಲಿ ಒಂದೊಂದು ಸೀಟಿಗೆ 80 ಲಕ್ಷ ರೂ. ವಸೂಲಿ ಮಾಡಿದ ಹಗರಣವೂ ನಡೆದಿದೆ. ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ವಿದ್ಯಾರ್ಥಿಯ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಉತ್ತರ ನೀಡಬೇಕುʼ ಎಂದು ಕನ್ನಡದಲ್ಲೇ ಹೇಳಿದರು.

ದೇಶದ ಯುವಕರು ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ನೋಡುತ್ತಿಲ್ಲ. ಅವರಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆ ಮತ್ತು ಶಾಶ್ವತ ಪರಿಹಾರ ಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಿದೆ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ ಎಂದು ಹೇಳಿದರು.

ಇಡೀ ದೇಶದ ಯುವಕರು ಸಂಸತ್ತಿನ ಚರ್ಚೆಯನ್ನು ಗಮನಿಸುತ್ತಿದ್ದಾರೆ. ಇಲ್ಲಿ ನಡೆಯುವ ಪರಸ್ಪರ ಆರೋಪಗಳಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ. ಹಿಂದೆ ಏನಾಯಿತು ಎಂಬುದಕ್ಕಿಂತ ಈಗ ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬುದೇ ವಿದ್ಯಾರ್ಥಿಗಳ ನಿರೀಕ್ಷೆ ಎಂದು ಹೇಳಿದರು.

ಪೇಪರ್ ಲೀಕ್‌ನಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಸಾಮಾನ್ಯ ಮತ್ತು ಬಡ ಕುಟುಂಬಗಳ ಮಕ್ಕಳಿಗೆ ನ್ಯಾಯಯುತ ಪರೀಕ್ಷಾ ವ್ಯವಸ್ಥೆಯೇ ಬದುಕು ಕಟ್ಟಿಕೊಳ್ಳುವ ದೊಡ್ಡ ಅವಕಾಶವಾಗಿದೆ. ಅದನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಇಂದಿನ ಶಿಕ್ಷಣ ಪದ್ಧತಿ ಮಕ್ಕಳನ್ನು ಕೇವಲ ರಟ್ಟೆ ಹೊಡೆದು ಪರೀಕ್ಷೆ ಬರೆಯುವಂತೆ ಮಾಡುತ್ತಿದೆ. ಒಂದು ದಿನದ ಮೂರು ಗಂಟೆಯ ಪರೀಕ್ಷೆ ವಿದ್ಯಾರ್ಥಿಯ ಇಡೀ ಭವಿಷ್ಯವನ್ನು ನಿರ್ಧರಿಸಬಾರದು. ಈ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಯುವಕರು ಪರೀಕ್ಷೆ ಸುಲಭವಾಗಲಿ ಎಂದು ಕೇಳುತ್ತಿಲ್ಲ. ಪ್ರಶ್ನೆಗಳಲ್ಲಿ ಹೊಸತನ ಇರಬೇಕು. ಬಹುಶಿಸ್ತೀಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕೇಳುತ್ತಿದ್ದಾರೆ. ಇದೇ ಉದ್ದೇಶದಿಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 34 ವರ್ಷಗಳ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಗೆ ತಂದಿದೆ ಎಂದು ಹೇಳಿದರು.

ಕಳೆದ ಒಂದು ವಾರದಿಂದ ವಿರೋಧ ಪಕ್ಷಗಳು ಪೇಪರ್ ಲೀಕ್ ಬಗ್ಗೆ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಆದರೆ ಸರ್ಕಾರವೇ ಕಠಿಣ ಕಾನೂನು ತಿದ್ದುಪಡಿ ವಿಧೇಯಕ ತಂದು ಚರ್ಚೆಗೆ ಅವಕಾಶ ನೀಡಿದಾಗ, ಅದೇ ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿವೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.


Spread the love

About Laxminews 24x7

Check Also

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಬೇಸತ್ತ ಜನ; ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ

Spread the loveಗದಗ: ಮೂಲ ಸೌಲಭ್ಯಗಳ ಕೊರತೆಯಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿ ಎದುರೇ ಚರಂಡಿಯ ಕಸ ಸುರಿದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ