ಬೆಳಗಾವಿ :ಕನ್ನಡ ಭಾಷೆ ಪರ ಗಟ್ಟಿ ನಿಲುವಳಿ ಕೈಗೊಳ್ಳಲು ಉದ್ದೇಶ ಪೂರಕವಾಗಿಯೇ ನಿರ್ಲಕ್ಷೃ ಮಾಡುತ್ತಿರುವ ಮಹಾನಗರ ಪಾಲಿಕೆ ಆಡಳಿತ ಮಂಡಳಿ ವಿರುದ್ಧ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ಪರ ಸಂಘಟನೆಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ,ಗಡಿ ವಿಷಯದಲ್ಲಿ ಪಕ್ಷ, ರಾಜಕೀಯ ವಿಷಯ ಮುಖ್ಯವಲ್ಲ. ನಾಡಿಗೆ ಬದ್ಧರಾಗಿ ಆಡಳಿತ ನಡೆಸುವ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಳ್ಳಬೇಕು. ಆದರೆ, ಬೆಳಗಾವಿ ಪಾಲಿಕೆ ಆಡಳಿತ ಮಂಡಳಿಯು ಪ್ರತಿಯೊಂದು ವಿಷಯದಲ್ಲಿ ಸರ್ಕಾರದ ಗಮನಕ್ಕೆ ತಾರದೆ ನಿರ್ಣಯ ಕೈಗೊಳ್ಳುತ್ತಾರೆ. ಕನ್ನಡ ಭಾಷೆ ಪರ ನಿರ್ಣಯ ಕೈಗೊಳ್ಳಲು ಸರ್ಕಾರ ಒಪ್ಪಿಗೆ ಕೇಳುತ್ತಿದ್ದಾರೆ. ಉದ್ದೇಶ ಪೂರಕವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಪಾಲಿಕೆ ನಡೆಯ ಸರ್ಕಾರ ನಿಗಾ ವಹಿಸಿದೆ. ಈ ವಿಷತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗಮನಕ್ಕೆ ಬಂದಿದೆ.
ನಗರದಲ್ಲಿ ಹಾಳಾಗಿರುವ ರಸ್ತೆ ದುರಸ್ತಿ ಕಾಮಗಾರಿಗಳನ್ನು ಪಾಲಿಕೆ ತನ್ನ ಅನುದಾನದಲ್ಲಿಯೇ ಕೈಗೊಳ್ಳಬೇಕು.ಇದಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ನೀಡುವುದಿಲ್ಲ.ಯೋಜನೆಗಳ ಅನುಷ್ಠಾನ ಸೇರಿ ಯಾವುದೇ ವಿಷಯ ಕುರಿತು ಸರ್ಕಾರದೊಂದಿಗೆ ಚರ್ಚಿಸುವುದಿಲ್ಲ. ಅನುದಾನಕ್ಕಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದರು.
ಇದೇ ಸಂದರ್ಭದಲ್ಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಮಾತನಾಡಿ,ಮೇ 13 ರ ಪಾಲಿಕೆಯ ಸಭೆ ನಡೆದ ನಂತರ ಯಾವದೇ ಪರಿಷತ ಸಭೆಯೇ ನಡೆದಿಲ್ಲ.ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು. ಆ.18ರಂದು ನಡೆಯಲಿರುವ ಪಾಲಿಕೆಯ ಸಾಮಾನ್ಯ ಸಭೆಯ ಕಲಾಪ ಪಟ್ಟಿಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯ ಬಗ್ಗೆ ಪ್ರಸ್ತಾಪವೇ ಇಲ್ಲ.
ಬೆಳಗಾವಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದಾಗ ಮಹಾಪೌರರು ಪ್ರಥಮ ಪ್ರಜೆಯಾಗಿ ಸ್ವಾಗತಿಸುವುದು ಒಂದು ಸಂಪ್ರದಾಯವಾಗಿದೆ. ಈ ಹಿಂದೆ ಎಂಇಎಸ್ ಬೆಂಬಲಿತ ಮೇಯರ್ ಸಹಿತರಾಜ್ಯದ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ ಉದಾಹರಣೆಗಳಿವೆ.ಆದರೆ ಈಗ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಪಕ್ಷದ ಮಹಾಪೌರರು ಮತ್ತು ಉಪ ಮಹಾಪೌರರು ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆ.ಹೀಗಾಗಿ ಪಾಲಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಶೋಕ ಚಂದರಗಿ,ಮಹಾದೇವ ತಳವಾರ,ಬಲರಾಮ ಮಾಸೇನಟ್ಟಿ,ರಾಜು ಕೋಲಾ,ಆರ್. ಪಿ.ಪಾಟೀಲ,ಸಂತೋಷ ಮಾಸೇನಟ್ಟಿ,ಆನಂದ ಬಿಲಾವರ, ಸಯ್ಯದ ಮನ್ಸೂರ್, ಮಹೇಶ ಸಿಗಿಹಳ್ಳಿ, ಸಂತೋಷ ತಳ್ಳಿಮನಿ,ಸಾಗರ ಪೂಜಾರಿ ಇತರರಿದ್ದರು.
Laxmi News 24×7