Breaking News

ಸಿಡಿ ಪ್ರಕರಣ: ಇದೊಂದು ಷಡ್ಯಂತ್ರ ಎಂದು ರಮೇಶ್ ಜಾರಕಿಹೊಳಿ ಪರ ನಿಂತ ಜೆಡಿಎಸ್

Spread the love

ಬೆಂಗಳೂರು:ರಮೇಶ್ ಜಾರಕಿಹೊಳಿಯ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು ಜೆಡಿ ಎಸ್ ಪಕ್ಷವು ಇದೊಂದು ಷಡ್ಯಂತ್ರ ಆಗಿದೆ ಎಂದಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಮೇಶ್ ಜಾರಕಿಹೊಳಿಯ ಪರ ನಿಂತಿದೆ.

‘ಆರಂಭದಲ್ಲಿ ಲೈಂಗಿಕ ಹಗರಣ, ಲೈಂಗಿಕ ಶೋಷಣೆಯಂತೆ ಕಾಣುತ್ತಿದ್ದ ಸಿ.ಡಿ ಹಗರಣ ಈಗ ಷಡ್ಯಂತ್ರದಂತೆ ಕಾಣುತ್ತಿದೆ. ಪ್ರಕರಣದಲ್ಲಿ ಡಿಕೆ‌ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬರುವ ಮೂಲಕ ಪ್ರಕರಣ ಈಗ ‘ಹನಿಟ್ರ್ಯಾಪ್‌’ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ರಾಷ್ಟ್ರದ ಎದುರು ನಾಚಿಕೆ ಪಡುವ ಸ್ಥಿತಿಯಲ್ಲಿ ರಾಜ್ಯ ನಿಂತಿದೆ.’

‘ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪ್‌ ಆಗಿದೆಯೋ ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬುದನ್ನು ಲೆಕ್ಕಿಸದೇ ಅಸಲಿ ಸಂಗತಿಯನ್ನು ಪೊಲೀಸರು ಹೊರ ತರಬೇಕು. ರಾಜ್ಯದ ಪೊಲೀಸರ ಕರ್ತವ್ಯ ನಿಷ್ಠೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರಿದೆ. ಅದರ ಪ್ರದರ್ಶನಕ್ಕೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ‘

‘ರಾತ್ರಿ ಒಂದು ಆಡಿಯೊ ಬಿಡುಗಡೆಯಾಗುವುದು, ಬೆಳಗ್ಗೆ ಅದಕ್ಕೊಂದು ಸ್ಪಷ್ಟನೆಯ ವಿಡಿಯೊ ಬಿಡುಗಡೆಯಾಗುವುದು… ಇವೆಲ್ಲವನ್ನೂ ಗಮನಿಸುತ್ತಿದ್ದರೆ ಇದರ ಹಿಂದೆ ದೊಡ್ಡ ಕೂಟವೇ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ನೆಪದಲ್ಲಿ, ಆಕೆಯನ್ನು ಮುಂದಿಟ್ಟುಕೊಂಡು ಯಾರೋ ಆಟವಾಡುತ್ತಿರುವುದು ಸ್ಪಷ್ಟವಾಗುತ್ತಲಿದೆ. ‘

‘ಪ್ರಕರಣವನ್ನು ಅದರಪಾಡಿಗೆ ಬಿಟ್ಟು, ಆಗುವ ಬೆಳವಣಿಗೆಯನ್ನು ರಾಷ್ಟ್ರ ನೋಡಿ ಮನರಂಜನೆ ಪಡೆಯುವಂತೆ ಮಾಡುವುದು ರಾಜ್ಯಕ್ಕೆ, ನಮ್ಮ ಪೊಲೀಸರಿಗೆ ಮಾಡುವ ಅತಿ ದೊಡ್ಡ ಅಪಮಾನವಾಗುತ್ತದೆ. ಈ ಸಂದರ್ಭದಲ್ಲಿ ಪೊಲೀಸರು ದಿಟ್ಟತನ ಮೆರೆಯುವುದು ಅತ್ಯಗತ್ಯ. ಯಾವುದೇ ರಾಜಕೀಯ ಒತ್ತಡಗಳನ್ನೂ ಲೆಕ್ಕಿಸದೇ ತನಿಖೆ ನಡೆಸಿ ಅಸಲಿ ಸತ್ಯ ಬಯಲಿಗೆಳೆಯಬೇಕು. ‘

‘ಲೈಂಗಿಕ ಪ್ರಕರಣವೊಂದರ ವರದಿಗಳು ನಿತ್ಯ ಪ್ರಕಟವಾಗುತ್ತಿದ್ದರೆ, ಅದರಿಂದ ಕುಟುಂಬಗಳು ಮತ್ತು ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ನಾವು ಚಿಂತಿಸಬೇಕಿದೆ. ಇದಕ್ಕೆ ಅಂತ್ಯ ಹಾಡಬೇಕಿದ್ದರೆ ಸೂಕ್ತ ತನಿಖೆಯೊಂದೇ ದಾರಿ. ಇಲ್ಲವಾದರೆ, ಈ ಪ್ರಕರಣದ ಬೆಳವಣಿಗೆಗಳು ಮತ್ತಷ್ಟು ವಿಸ್ತಾರವಾಗುತ್ತ ನಾಗರಿಕ ಸಮಾಜ ನಾಚಿಕೆಯಲ್ಲಿ ದಿನ ಕಳೆಯಬೇಕಾಗುತ್ತದೆ.’
ಎಂದು ಸರಣಿ ಟ್ವೀಟ್ ಮಾಡಿದೆ.


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ