ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು ಹೊರಬರುತ್ತಿದ್ದು ಪತ್ನಿ ಕುಟುಂಬದ ಬರೋಬ್ಬರಿ 3 ಕೋಟಿ ಮೌಲ್ಯದ ಆಸ್ತಿಗಾಗಿಯೇ ಈ ಭೀಕರ ನರಮೇಧ ನಡೆದಿದೆ ಎಂದು ಹತ್ಯೆಯಾದ ನಳಿನಿ ಅವರ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಒಬ್ಬೊಬ್ಬರನ್ನೇ ಮನೆಗೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಆರೋಪಿ ಇಂದುಶೇಖರ್ ಮುಖವಾಡವನ್ನು ಮೃತ ನಳಿನಿ ಅವರ ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಾ ಬಿಚ್ಚಿಟ್ಟಿದ್ದಾರೆ.
ಇಂದುಶೇಖರನ ಬಾಮೈದ ಶಂಕರನಿಗೆ ನಳಿನಿಯನ್ನು ಮದುವೆ ಮಾಡಿಕೊಡಲಾಗಿತ್ತು. ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮಗಳು ನಳಿನಿ ನನಗೆ ಕರೆ ಮಾಡುತ್ತಿದ್ದಳು. ಆದರೆ ಶುಕ್ರವಾರ ಬೆಳಿಗ್ಗೆ 7 ಗಂಟೆ ಕರೆ ಮಾಡಿದಾಗ ಆಕೆ, ‘ಏನೋ ಗಲಾಟೆ ಆಗಿದೆ, ಮನೆಗೆ ಹೋಗಿ ನೋಡಿ ಬರುತ್ತೇನೆ’ ಎಂದು ಹೇಳಿ ಹೋದಳು. ಆ ಬಳಿಕ ಆಕೆಯಿಂದ ಯಾವುದೇ ಕರೆಯೂ ಬರಲಿಲ್ಲ. ಒಂದು ಗಂಟೆ ಕಾದರೂ ಮಗಳು ಸಂಪರ್ಕಕ್ಕೆ ಸಿಗದಿದ್ದಾಗ, ಅನುಮಾನಗೊಂಡು ಅಳಿಯನಿಗೆ ಫೋನ್ ಮಾಡಿದೆ. ಆದರೆ ಸಂಜೆಯಾದರೂ ಆತನ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ನನ್ನ ಅಳಿಯನ ಫೋನ್ ಸ್ವಿಚ್ ಆಫ್ ಆಗಲು ಸಾಧ್ಯವೇ ಇಲ್ಲ. ಹೀಗಾಗಿ ನಮಗೆ ಭಯ ಅನುಮಾನವಾಯ್ತು ಎಂದು ತಿಳಿಸಿದರು.
ಶನಿವಾರ ಬೆಳಿಗ್ಗೆ ವಿಚಾರಿಸಿದಾಗ ಇಂದುಶೇಖರ್ ‘ನಾದಿನಿ ಟ್ರಿಪ್‌ಗೆ ಹೋಗಿದ್ದಾಳೆ’ ಎಂದು ಸುಳ್ಳು ಕಥೆ ಕಟ್ಟಿ ನಮ್ಮನ್ನು ನಂಬಿಸಲು ನೋಡಿದ. ಭಾಷ್ಯಂ ಸರ್ಕಲ್ ಬಳಿ ಇದ್ದ ಮನೆಗೆ ಬೀಗ ಹಾಕಿ ಮೋಸ ಮಾಡಿದ್ದಾನೆ. ಆ ದಗಲ್ಬಾಜಿ ಇಷ್ಟೊಂದು ಕ್ರೂರಿಯಾಗಿ ವರ್ತಿಸುತ್ತಾನೆ ಎಂದು ನಾವು ಕನಸಲ್ಲೂ ಎಣಿಸಿರಲಿಲ್ಲ. ಇವನಿಗೆ ಹೇಗೆ ಇಷ್ಟು ಜನರ ಪ್ರಾಣ ತೆಗೆಯಲು ಮನಸ್ಸು ಬಂತು ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಮನೆಯ ಹಿಂಭಾಗದಲ್ಲೇ ಆಫೀಸ್ ಇತ್ತು, ಅಳಿಯ ಚೆನ್ನಾಗಿಯೇ ಬಂದು ಹೋಗುತ್ತಿದ್ದ. ಆದರೆ ಇಷ್ಟೆಲ್ಲಾ ಸೋಗು ಹಾಕಿ ಕೊನೆಗೆ ಅತ್ತೆ, ದೊಡ್ಡ ಮಗ, ದೊಡ್ಡ ಸೊಸೆ ಮತ್ತು ಮೊಮ್ಮಗ ಸೇರಿದಂತೆ ಇಡೀ ಕುಟುಂಬವನ್ನೇ ಮನೆಗೆ ಕರೆಸಿಕೊಂಡು ಒಂದೇ ಸಮನೆ ಕೊಂದು ಹಾಕಿದ್ದಾನೆ ಎಂದು ಕಣ್ಣೀರು ಹಾಕುತ್ತಾ ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.
Laxmi News 24×7