Breaking News

ಪೆಟ್ರೋಲ್‌ನಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಮಿಶ್ರಣ, ತೈಲ ಕಂಪನಿಗಳಿಗೆ ಲಾಭ: ರಿಜ್ವಾನ್ ಅರ್ಷದ್

Spread the love

ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಇದು ವಾಹನಗಳ ದಕ್ಷತೆಗೆ ತೀವ್ರ ಧಕ್ಕೆ ತರುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಗಂಭೀರ ಆರೋಪ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ನಡೆಸಿದ ಪ್ರಯೋಗಾಲಯ ಪರೀಕ್ಷಾ ವರದಿಗಳನ್ನು(Lab Report) ಬಹಿರಂಗಪಡಿಸಿ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಪೆಟ್ರೋಲ್‌ನಲ್ಲಿ ಎಥೆನಾಲ್ ಬಳಕೆ ಕುರಿತು ವ್ಯಾಪಕ ಗೊಂದಲ ಹಾಗೂ ಮಾಧ್ಯಮ ವರದಿಗಳು ಬಂದ ಹಿನ್ನೆಲೆಯಲ್ಲಿ, ಇಲಾಖೆಯ ವತಿಯಿಂದ ರಾಜ್ಯಾದ್ಯಂತ ಒಟ್ಟು 63 ಇಂಧನ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು. ಆರಂಭದಲ್ಲಿ ಇ-20 ಪರೀಕ್ಷೆಗಾಗಿ ತೈಲ ಮಾರುಕಟ್ಟೆ ಕಂಪನಿಗಳ ಅಧಿಕೃತ ಲ್ಯಾಬ್‌ಗಳಿಗೆ ಕಳುಹಿಸಲಾಯಿತಾದರೂ ಅಲ್ಲಿ ಎಥೆನಾಲ್ ಪ್ರಮಾಣದ ನಿಖರ ಮಾಹಿತಿ ನೀಡಲು ಹಿಂದೇಟು ಹಾಕಲಾಯಿತು. ಹೀಗಾಗಿ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲಾದ 7 ಸ್ಯಾಂಪಲ್‌ಗಳ ಪೈಕಿ 5 ಸ್ಯಾಂಪಲ್‌ಗಳಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಇರುವುದು ದೃಢಪಟ್ಟಿದೆ. ಕೆಲವು ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಬರೋಬ್ಬರಿ ಶೇ. 31.02 ರಷ್ಟಿರುವುದು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದರು.

Karnataka Govt Demands Transparency in Petrol Blending Ethano 2

ದೇಶದಲ್ಲಿ ಸಂಚರಿಸುತ್ತಿರುವ ಸುಮಾರು 35 ಕೋಟಿ ವಾಹನಗಳ ಪೈಕಿ ಶೇ.99 ರಷ್ಟು ವಾಹನಗಳು ಇ-20 ಗಿಂತ ಹೆಚ್ಚಿನ ಇಂಧನ ಸಂಯೋಜನೆಗೆ ಸೂಕ್ತವಾಗಿ ವಿನ್ಯಾಸಗೊಂಡಿಲ್ಲ. ಅಲ್ಲದೆ, ಬಂಕ್‌ಗಳಲ್ಲಿರುವ ಹೆಚ್ಚಿನ ಇಂಧನ ಡಿಸ್ಪೆನ್ಸಿಂಗ್ ಯೂನಿಟ್‌ಗಳು ಕೇವಲ ಶೇ. 15 ರಷ್ಟು ಮಿಶ್ರಣಕ್ಕೆ ಮಾತ್ರ ಹೊಂದಿಕೊಳ್ಳುತ್ತವೆ. ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಕೇಂದ್ರ ಹೇಳುತ್ತಿದ್ದರೂ, ಅದರ ಕಿಂಚಿತ್ತೂ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ. ವಾಹನ ಮಾಲೀಕರು ಮೈಲೇಜ್ ಕೊರತೆ ಹಾಗೂ ದುರಸ್ತಿಯ ನಷ್ಟ ಅನುಭವಿಸುತ್ತಿದ್ದರೆ, ತೈಲ ಕಂಪನಿಗಳು ದಾಖಲೆಯ ಲಾಭ ಗಳಿಸುತ್ತಿವೆ. ಆಟೋಮೊಬೈಲ್ ಕಂಪನಿಗಳು ಕೂಡ ಸ್ಪೇರ್ ಪಾರ್ಟ್ಸ್ ಮತ್ತು ಸರ್ವೀಸ್ ಮೂಲಕ ಶೇ. 50 ರಷ್ಟು ಲಾಭ ಮಾಡಿಕೊಳ್ಳುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ಎಥೆನಾಲ್ ಬಳಕೆಯಿಂದ ಮೈಲೇಜ್ ಕಡಿಮೆಯಾಗುತ್ತದೆ ಎಂದು ನೀತಿ ಆಯೋಗವೇ ಹೇಳಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದನ್ನು ‘ಪೇಯ್ಡ್ ಕ್ಯಾಂಪೇನ್’ ಎನ್ನುತ್ತಿದೆ. ಹಾಗಾದರೆ ಇಲ್ಲಿ ಪಾವತಿ ಮಾಡುತ್ತಿರುವುದು ಯಾರು? ಜನಸಾಮಾನ್ಯರೇ ಪಾವತಿ ಮಾಡುತ್ತಿರುವುದು ಅಲ್ವೇ ಎಂದು ರಿಜ್ವಾನ್ ಅರ್ಷದ್ ಖಾರವಾಗಿ ಪ್ರಶ್ನಿಸಿದರು.

ಈ ಗಂಭೀರ ದಾಖಲೆಗಳನ್ನು ಬಹಿರಂಗಪಡಿಸಿರುವುದಕ್ಕೆ ನನಗೆ ಯಾವುದೇ ಭಯವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ಹೆದರಬೇಡಿ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ನನ್ನ ಮೇಲಿಟ್ಟ ವಿಶ್ವಾಸಕ್ಕೆ ತಕ್ಕಂತೆ, ಜನರ ಹಿತರಕ್ಷಣೆಗಾಗಿ ಪ್ರಮಾಣವಚನ ಸ್ವೀಕರಿಸಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ಹಿನ್ನಡೆಯಾಗುವ ಭಯ ನನಗಿಲ್ಲ, ಜನರ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇನೆ” ಎಂದು ಹೇಳಿದರು.

ಸರ್ಕಾರದ ಬೇಡಿಕೆ ಏನು?
ಅಕ್ರಮ ಮಿಶ್ರಣದ ಕುರಿತು ನಿಖರ ಸಾಕ್ಷ್ಯಾಧಾರಗಳು ಲಭ್ಯವಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು ಗ್ರಾಹಕರಿಗೆ ವಾಸ್ತವವಾಗಿ ಪೂರೈಕೆಯಾಗುತ್ತಿರುವ ಎಥೆನಾಲ್ ಮಿಶ್ರಣದ ನೈಜ ಪ್ರಮಾಣವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಜನರ ಮುಂದಿಡಬೇಕು.

ಶೇ. 20ರ ಕಾನೂನುಬದ್ಧ ಮಿತಿಗಿಂತ ಹೆಚ್ಚಿನ ಎಥೆನಾಲ್ ಬೆರೆತ ಪೆಟ್ರೋಲ್ ಸರಬರಾಜು ಮಾಡುತ್ತಿರುವ IOCL, BPCL, HPCL ಮತ್ತು ಸಂಬಂಧಿತ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಾಗೆಯೇ, ಕರ್ನಾಟಕಕ್ಕೆ ಪೂರೈಕೆಯಾಗುವ ಪ್ರತಿಯೊಂದು ಹನಿಯ ಇಂಧನದ ಮಿಶ್ರಣ ಮಟ್ಟವನ್ನು ಪಾರದರ್ಶಕವಾಗಿ ದಾಖಲಿಸಿ, ಪಂಪ್ ಮಟ್ಟದ ಸಮಗ್ರ ಲೆಕ್ಕಪರಿಶೋಧನಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

ಹಾನಿಗೊಳಗಾದ ವಾಹನಗಳಿಗೆ ಅಧಿಕೃತ ಸರ್ವೀಸ್ ಸೆಂಟರ್‌ಗಳಿಂದ ಹಾನಿಯ ವರದಿ ಪಡೆದು, ಕಾಲಮಿತಿಯೊಳಗೆ ಪರಿಹಾರ ವಿತರಿಸಲು ಸುಲಭ ಕ್ಲೈಮ್ ವ್ಯವಸ್ಥೆ ರೂಪಿಸಬೇಕು. ತೈಲ ಕಂಪನಿಗಳ ಅಕ್ರಮದಿಂದ ಹಾನಿಗೊಳಗಾದ ಪ್ರತಿ ವಾಹನ ಮಾಲೀಕನಿಗೂ ಕಡ್ಡಾಯವಾಗಿ ನಷ್ಟಪರಿಹಾರ ದಕ್ಕಬೇಕು.

ದೇಶಾದ್ಯಂತ ಪ್ರತಿ ಪೆಟ್ರೋಲ್ ಪಂಪ್‌ನಲ್ಲೂ ಎಷ್ಟು ಪ್ರಮಾಣದ ಎಥೆನಾಲ್ ಬೆರೆಸಲಾಗಿದೆ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇದರಿಂದ ಲಭ್ಯವಿರುವ ಆಯ್ಕೆಗಳಲ್ಲಿ ಗ್ರಾಹಕರಿಗೆ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಸಿಗಬೇಕು.


Spread the love

About Laxminews 24x7

Check Also

3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!

Spread the love ಬೆಂಗಳೂರು: ರಾಜಧಾನಿಯನ್ನು ಬೆಚ್ಚಿಬೀಳಿಸಿದ ಏಳು ಜನರ ಭೀಕರ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ