Breaking News

ಕುಡಿಯುವ ನೀರಿಗೂ ಪರದಾಟ; ಕೆರೆಯ ಕಲುಷಿತ ನೀರೇ ಆಧಾರ, 29 ಕುಟುಂಬಗಳ ಗೋಳು ಕೇಳೋರಿಲ್ಲ

Spread the love

ಮಡಿಕೇರಿ: ಬಡವರಿಗೆ ಸೂರು ಕಲ್ಪಿಸಬೇಕು, ಪ್ರತಿಯೊಬ್ಬರಿಗೂ  ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪೊನ್ನತ್‌ ಮೊಟ್ಟೆ ಗ್ರಾಮದಲ್ಲಿ ಸರ್ಕಾರಿ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವ 29 ಕುಟುಂಬಗಳು ಇಂದಿಗೂ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿವೆ. ಇದೀಗ ಬಾವಿಯೂ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಕೆರೆಯ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಒಂದೆಡೆ ಅಭಿವೃದ್ಧಿಯ ಮಾತುಗಳು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಬಡ ಕುಟುಂಬಗಳು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಪೊನ್ನತ್‌ ಮೊಟ್ಟೆ ಗ್ರಾಮದ ಸರ್ಕಾರಿ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವ 29 ಕುಟುಂಬಗಳು ಕಳೆದ ಎರಡು-ಮೂರು ವರ್ಷಗಳಿಂದ ನಿವೇಶನ ಹಾಗೂ ಶಾಶ್ವತ ಸೂರು ಕಲ್ಪಿಸಿಕೊಡುವಂತೆ ಹೋರಾಟ ನಡೆಸುತ್ತಿವೆ. ಆದರೆ, ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಖಾಲಿ ಜಾಗದಲ್ಲೇ ಪ್ಲಾಸ್ಟಿಕ್‌ ಶೀಟ್‌ ಮತ್ತು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ.

ಮಳೆ ಬಂದರೆ ಟೆಂಟ್‌ಗಳಲ್ಲಿ ಸೋರಿಕೆಯ ಆತಂಕ, ಬಿಸಿಲು ಹೆಚ್ಚಾದರೆ ನೀರಿನ ಅಭಾವ. ಹೀಗೆ ಒಂದಲ್ಲೊಂದು ಸಮಸ್ಯೆಯ ನಡುವೆ ಈ ಕುಟುಂಬಗಳು ದಿನದೂಡುತ್ತಿವೆ. ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ನಿವಾಸಿಗಳನ್ನು ಹೈರಾಣಾಗಿಸಿದೆ.

ಎರಡು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಪಂಚಾಯಿತಿ ವತಿಯಿಂದ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಇತ್ತು ಎನ್ನಲಾಗಿದೆ. ಆದರೆ, ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ನೀರು ಸರಬರಾಜಿನ ಸಂಪರ್ಕ ಕಡಿತಗೊಳಿಸಲಾಗಿದೆ ಎಂಬುದು ಸ್ಥಳೀಯರ ಆರೋಪ. ಇದರಿಂದಾಗಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ನಿವಾಸಿಗಳು ತಮ್ಮದೇ ಪ್ರಯತ್ನದಿಂದ ಬಾವಿಯೊಂದನ್ನು ತೋಡಿಕೊಂಡು ನೀರು ಬಳಸುತ್ತಿದ್ದರು.

ಆದರೆ, ಬೇಸಿಗೆಯ ಬಿಸಿಲಿನ ತಾಪಕ್ಕೆ ಅಂತರ್ಜಲ ಮಟ್ಟ ಕುಸಿದು ಇದೀಗ ಆ ಬಾವಿಯೂ ಸಂಪೂರ್ಣವಾಗಿ ಬತ್ತಿಹೋಗಿದೆ. ಹೀಗಾಗಿ, ಬೇರೆ ದಾರಿಯಿಲ್ಲದೆ ಸಮೀಪದ ಕೆರೆಯ ನೀರನ್ನೇ ದಿನನಿತ್ಯದ ಬಳಕೆಗೆ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಕುಟುಂಬಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಕೆರೆಯ ನೀರನ್ನು ಬಳಸುತ್ತಿರುವುದರಿಂದ ಮಕ್ಕಳು ಹಾಗೂ ವಯೋವೃದ್ಧರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ತುರಿಕೆ ಹಾಗೂ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎನ್ನಲಾಗಿದೆ.

ಮಕ್ಕಳ ಆರೋಗ್ಯದ ಬಗ್ಗೆ ಆತಂಕವಿದ್ದರೂ, ಪರ್ಯಾಯ ವ್ಯವಸ್ಥೆಯಿಲ್ಲದೆ ಕೆರೆಯ ನೀರನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಿವಾಸಿಗಳ ಒತ್ತಾಯವಾಗಿದೆ.

ತಮ್ಮ ಸಂಕಷ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಿವಾಸಿಗಳು, ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ನಮಗೆ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಂತಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಪಬ್ಲಿಕ್‌ ಟಿವಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ, ಬತ್ತಿಹೋದ ಬಾವಿ, ಕೆರೆಯ ನೀರಿನ ಅನಿವಾರ್ಯ ಬಳಕೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆ 29 ಕುಟುಂಬಗಳ ಬದುಕು ಸಾಗುತ್ತಿದೆ. ಮಕ್ಕಳ ಆರೋಗ್ಯದ ಆತಂಕದ ನಡುವೆಯೂ ದಿನದೂಡುತ್ತಿರುವ ಈ ಕುಟುಂಬಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ನೆರವಾಗುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.


Spread the love

About Laxminews 24x7

Check Also

ಧಾರವಾಡದ ಸ್ಟೀಲ್‌ ಅಂಗಡಿಯಲ್ಲಿ ಅಗ್ನಿ ದುರಂತ – ಕಂತೆ ಕಂತೆ ಹಣ ಬೆಂಕಿಗಾಹುತಿ

Spread the loveಧಾರವಾಡ: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸ್ಟೀಲ್ ಅಂಗಡಿಗೆ ಬೆಂಕಿ  ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ