ತಿರುವನಂತಪುರಂ: ಕೇರಳದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಾಂಗ್ಲಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಪ್ಲೋಬ್ ಸೊರೆನ್ (32) ಬಂಧನಕ್ಕೊಳಗಾದ ವ್ಯಕ್ತಿ. ಈತ ಭಾರತೀಯ ಪ್ರಜೆ ಎಂಬಂತೆ ನಕಲಿ ದಾಖಲೆಗಳನ್ನು ನೀಡಿ ನೌಕಾ ಅಕಾಡೆಮಿಯ ಲಾಂಡ್ರಿ ವಿಭಾಗದಲ್ಲಿ ಗುತ್ತಿಗೆ ನೌಕರನಾಗಿ ಕೆಲಸಕ್ಕೆ ಸೇರಿದ್ದ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸೊರೆನ್ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಭಾರತದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಆತನ ನಡವಳಿಕೆಯ ಬಗ್ಗೆ ಅನುಮಾನಗೊಂಡ ನೌಕಾಪಡೆಯ ಅಧಿಕಾರಿಗಳು ನಿಗಾ ಇರಿಸಿದ್ದರು. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆತನ ಮೊಬೈಲ್ ಸಿಕ್ಕ ಮಾಹಿತಿಗಳ ಪ್ರಕಾರ ಆತ ಬಾಂಗ್ಲಾ ಪ್ರಜೆ ಎಂದು ಗೊತ್ತಾಗಿದೆ.
ನೌಕಾಪಡೆಯ ಅಧಿಕಾರಿಗಳು ವಿಚಾರಣೆ ನಡೆಸಿ ಶುಕ್ರವಾರ (ಸೆ.18) ರಾತ್ರಿ ಸುಮಾರು 8:15ರ ಸುಮಾರಿಗೆ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದೇಶಿ ಪ್ರಜೆಯೊಬ್ಬ ತನ್ನ ರಾಷ್ಟ್ರೀಯತೆಯ ಗುರುತು ಮುಚ್ಚಿಟ್ಟು, ಸೂಕ್ಷ್ಮ ಪ್ರದೇಶದಲ್ಲಿ ಸುಮಾರು ಒಂದು ವರ್ಷದವರೆಗೆ ಗುತ್ತಿಗೆ ನೌಕರನಾಗಿ ಕೆಲಸ ಮಾಡಿರುವುದು ತೀವ್ರ ಕಳವಳಕ್ಕೂ ಕಾರಣವಾಗಿದೆ.
ಗುಪ್ತಚರ ಸಂಸ್ಥೆಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ. ಬಾಂಗ್ಲಾದೇಶಿ ಪ್ರಜೆಯು ನಕಲಿ ದಾಖಲೆಗಳನ್ನು ಹೇಗೆ ಪಡೆದ? ಸೂಕ್ಷ್ಮ ರಕ್ಷಣಾ ಸಂಸ್ಥೆಗೆ ಪ್ರವೇಶ ಹೇಗೆ ಗಿಟ್ಟಿಸಿಕೊಂಡ? ಆತನಿಗೆ ಯಾರು ಸಹಾಯ ಮಾಡಿದ್ದರು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕಣ್ಣೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಾಂಗ್ಲಾದೇಶಿ ಪ್ರಜೆಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದೆ.
Laxmi News 24×7