ಹಾಸನ: ಗಣಪತಿ ವಿಸರ್ಜನೆ ವೇಳೆ ಧ್ವನಿವರ್ಧಕ ಬಳಕೆಗೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಿ ತೆರಳಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಮಾರನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಗಣಪತಿಯನ್ನು ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ. ಈ ವರ್ಷವೂ ಗೌರಿ-ಗಣಪತಿಯನ್ನು ಪ್ರತಿಷ್ಠಾಪಿಸಿ ಇಂದು ಅದ್ಧೂರಿಯಾಗಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲು ಗ್ರಾಮಸ್ಥರು ತೆರಳುತ್ತಿದ್ದರು.
ಒಂದು ಟ್ರ್ಯಾಕ್ಟರ್ನಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಗ್ರಾಮಸ್ಥರು ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ಮೆರವಣಿಗೆಗೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಕ್ರಮಕ್ಕೆ ಕೆರಳಿದ ಗ್ರಾಮಸ್ಥರು ಮೆರವಣಿಗೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಬಳಿಕ ನೂರಾರು ಗ್ರಾಮಸ್ಥರು ಸ್ಥಳದಿಂದ ತೆರಳಿದ್ದಾರೆ.
ಇದರಿಂದ ಗೌರಿ-ಗಣಪತಿ ವಿಗ್ರಹವಿದ್ದ ಟ್ರ್ಯಾಕ್ಟರ್ನ್ನು ರಸ್ತೆ ಬದಿಯಲ್ಲೇ ನಿಲ್ಲಿಸಲಾಗಿದ್ದು, ವಿಗ್ರಹಗಳು ಅನಾಥವಾಗಿರುವಂತಾಗಿದೆ. ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Laxmi News 24×7