ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ ಗಣೇಶ ಚತುರ್ಥಿಯ ಶುಭದಿನದಂದು ನಡೆದಿದ್ದು ಈಗ ಫೋಟೋಗಳು ಲಭ್ಯವಾಗಿದೆ.
ಹೊಸ ಮನೆಯ ಗೃಹಪ್ರವೇಶ ಸಂದರ್ಭದಲ್ಲಿ ಸಂಪ್ರದಾಯದಂತೆ ಗೋಪೂಜೆ ಮಾಡಲಾಗಿದೆ. ಮನೆಯ ಒಳಗಡೆ ಹಸು ಮತ್ತು ಕರುವನ್ನು ಕರೆದುಕೊಂಡು ಹೋಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಯತೀಂದ್ರ ಅವರು ಲಕ್ಷ್ಮಿದೇವಿಯ ಫೋಟೋವನ್ನು ಹಿಡಿದು ನಿಂತಿದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಪತ್ನಿಯ ಆಸೆಯಂತೆ ಸಿದ್ದರಾಮಯ್ಯ ಅವರು ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಗಣೇಶ ಚತುರ್ಥಿ ಶುಭ ದಿನದಿಂದದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೇರವೇರಿದೆ.
ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ 80*120 ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ನೂತನ ಬಂಗಲೆಯನ್ನು ನಿರ್ಮಿಸಲಾಗಿದೆ. ಯಾವುದೇ ಅಧಿಕೃತ ಪ್ರವಾಸ ಪಟ್ಟಿ ಇಲ್ಲದೆ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕುಟುಂಬಸ್ಥರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.
ಭಾನುವಾರ ರಾತ್ರಿ ನೂತನ ನಿವಾಸದಲ್ಲಿ ವಿವಿಧ ಧಾರ್ಮಿಕ ಪೂಜೆಗಳನ್ನು ನೆರವೇರಿಸಲಾಯಿತು. ಸೋಮವಾರ ಬೆಳಗ್ಗೆಯೂ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿ, ಕೇವಲ ಕುಟುಂಬಸ್ಥರು ಹಾಗೂ ಅತ್ಯಂತ ಆಪ್ತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಗೃಹ ಪ್ರವೇಶ ಮಾಡಲಾಯಿತು.
ಗೋಪೂಜೆ ಯಾಕೆ?
ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆ ಇರುವುದರಿಂದ ಗೃಹಪ್ರವೇಶದ ದಿನದಂದು ಗೋಪೂಜೆ ಮಾಡುವುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಶುಭದಾಯಕ ಎಂದು ಪರಿಗಣಿಸಲಾಗಿದೆ. ಹೊಸ ಮನೆಗೆ ಹಸುವನ್ನು ಕರೆತಂದು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.
ಗೋವಿನ ಪೂಜೆಯಿಂದ ಮಹಾಲಕ್ಷ್ಮಿ ಸೇರಿದಂತೆ ಎಲ್ಲಾ ದೇವತೆಗಳ ಆಶೀರ್ವಾದ ಒಟ್ಟಿಗೆ ಸಿಗುತ್ತದೆ. ಹೊಸ ಜಾಗದಲ್ಲಿ ಏನಾದರೂ ವಾಸ್ತು ದೋಷಗಳಿದ್ದರೆ ಗೋಪೂಜೆಯಿಂದ ಅವು ನಿವಾರಣೆಯಾಗುತ್ತವೆ. ಹೊಸ ಮನೆಗೆ ಬಂದ ಹಸು ಅಲ್ಲಿ ಮೂತ್ರ ವಿಸರ್ಜನೆ ಅಥವಾ ಸಗಣಿ ಹಾಕಿದರೆ ಅದನ್ನು ಅತ್ಯಂತ ಅದೃಷ್ಟ ಮತ್ತು ಶುಭ ಶಕುನ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಆ ಮನೆಯಲ್ಲಿ ಧಾನ್ಯ ಮತ್ತು ಧನದ ಕೊರತೆ ಎಂದಿಗೂ ಬರುವುದಿಲ್ಲ ಎಂಬ ನಂಬಿಕೆಯಿದೆ.
Laxmi News 24×7