ಮೈಸೂರು: ಸ್ಥಳೀಯ ವಾಹಿನಿಗಳ ಪತ್ರಕರ್ತರಿಗೆ ಧಮ್ಕಿ ಹಾಕಿ, ಈಗಾಗಲೇ ಅಪ್ಲೋಡ್ ಮಾಡಲಾಗಿದ್ದ ವಿಡಿಯೋಗಳನ್ನ ಡಿಲೀಟ್ ಮಾಡಿಸಿರುವ ಆರೋಪ ಇನ್ಸ್ಪೆಕ್ಟರ್ ಧನಂಜಯ ಅವರ ವಿರುದ್ಧ ಕೇಳಿಬಂದಿದೆ.
ಇತ್ತೀಚೆಗೆ ನಡೆದ ಶಾಂತಿ ಸಭೆಯ ವೇಳೆ ಸ್ಥಳೀಯ ವಾಹಿನಿಗಳನ್ನ ಸ್ವತಃ ಕರೆಸಿಕೊಂಡಿದ್ದ ಧನಂಜಯ ಅವರು, ಮಾಧ್ಯಮಗಳ ಮುಂದೆ ಹೀರೋಯಿಸಂ ತೋರಿಸಿದ್ದರು. ಆದರೆ ಇದೀಗ ಅದೇ ಹೀರೋಯಿಸಂ ಎಡವಟ್ಟಾಗಿ ಪರಿಣಮಿಸಿದ ಬೆನ್ನಲ್ಲೇ, ವಿಡಿಯೋಗಳನ್ನ ಪ್ರಸಾರ ಮಾಡಿದ ಸ್ಥಳೀಯ ವಾಹಿನಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇನ್ಸ್ಪೆಕ್ಟರ್ ಧನಂಜಯ ಅವರ ಈ ನಡೆ ಇದೀಗ ಸ್ಥಳೀಯ ಮಾಧ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಡಿಯೋಗಳನ್ನು ಡಿಲೀಟ್ ಮಾಡಿಸುವಂತೆ ಪತ್ರಕರ್ತರ ಮೇಲೆ ಒತ್ತಡ ಹೇರಲಾಗಿತ್ತೇ ಎಂಬ ಪ್ರಶ್ನೆಯೂ ಎದ್ದಿದೆ.
ಹಿಂದೂ ಜಾಗರಣ ವೇದಿಕೆ ಬಹಿರಂಗ ಸವಾಲು
ಮೈಸೂರಿನ ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಅವರ ಧಮ್ಕಿಗೆ ಪ್ರತಿಯಾಗಿ ಹಿಂದೂ ಜಾಗರಣ ವೇದಿಕೆ ಬಹಿರಂಗ ಸವಾಲು ಹಾಕಿದೆ. ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಗಣೇಶ ಶೋಭಾಯಾತ್ರೆ ನಡೆಸಲು ಸಕಲ ಸಿದ್ಧತೆ ಕೈಗೊಂಡಿದೆ. ಟಿ. ನರಸೀಪುರದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ಅಂತರದಲ್ಲಿ ಹಿಂದೂ ಮಹಾಗಣಪತಿಯನ್ನು ಅದ್ಧೂರಿಯಾಗಿ ಪ್ರತಿಷ್ಠಾಪಿಸಲಾಗಿದೆ.
ʻಮಸೀದಿ ಇರುವ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ಬಂದರೆ ಗ್ರಹಚಾರ ಬಿಡಿಸುತ್ತೇನೆʼ ಎಂದು ಇನ್ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ ವಿಡಿಯೋ ತೀವ್ರ ಸಂಚಲನ ಮೂಡಿಸಿತ್ತು. ಈ ಸವಾಲನ್ನು ಸ್ವೀಕರಿಸಿರುವ ಹಿಂದೂ ಜಾಗರಣ ವೇದಿಕೆ, ಸೆಪ್ಟೆಂಬರ್ 18ರಂದು ಅದೇ ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಭವ್ಯ ಶೋಭಾಯಾತ್ರೆ ನಡೆಸುವುದಾಗಿ ಘೋಷಿಸಿದೆ.
ಇನ್ಸ್ಪೆಕ್ಟರ್ ಧನಂಜಯ್ ಅವರ ಸವಾಲನ್ನ ನಾವು ಸ್ವೀಕರಿಸಿದ್ದೇವೆ. ಈ ಐತಿಹಾಸಿಕ ಮೆರವಣಿಗೆಯನ್ನ ಇನ್ಸ್ಪೆಕ್ಟರ್ ಧನಂಜಯ್ ಅವರು ಕಣ್ತುಂಬ ಮನೆಯಲ್ಲಿ ಕುಳಿತುಕೊಂಡು ನೋಡಿಕೊಳ್ಳಲಿ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್ ಸವಾಲು ಹಾಕಿದ್ದಾರೆ.
Laxmi News 24×7