ಚೆನ್ನೈ: ತಾನು ಪ್ರತಿನಿಧಿಸುವ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಶಾಸಕ ವಿ.ಎಸ್.ಬಾಬು ಅವರ ಗೆಲುವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠವು ಸ್ಟಾಲಿನ್ ಅವರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.
ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಾಬು ಅವರು ಸ್ಟಾಲಿನ್ ಅವರನ್ನು 8,795 ಮತಗಳಿಂದ ಸೋಲಿಸಿದರು. ಬಾಬು 82,997 ಮತಗಳನ್ನು ಗಳಿಸಿದರೆ, ಸ್ಟಾಲಿನ್ 74,202 ಮತಗಳನ್ನು ಗಳಿಸಿದರು. 2011 ರಲ್ಲಿ ಕೊಳತ್ತೂರು ಕ್ಷೇತ್ರ ರಚನೆಯಾದಾಗಿನಿಂದ ಸತತ ಮೂರು ಚುನಾವಣೆಗಳಲ್ಲಿ ಗೆದ್ದಿದ್ದ ಸ್ಟಾಲಿನ್ ಈ ಬಾರಿ ಮುಖಭಂಗ ಅನುಭವಿಸಿದ್ದರು.
ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್‌ಗಳಲ್ಲಿ ದಾಖಲಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆ. ಪರಿಶೀಲನೆ ವೇಳೆ ಇವಿಎಂಗಳಲ್ಲಿ ಕಂಡುಬಂದ ತಾಂತ್ರಿಕ ದೋಷಗಳನ್ನು ಚುನಾವಣಾ ಅಧಿಕಾರಿಗಳು ಬಗೆಹರಿಸಿಲ್ಲ ಎಂದು ಎಂ.ಕೆ.ಸ್ಟಾಲಿನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೇ 4 ರಂದು ಫಲಿತಾಂಶ ಪ್ರಕಟವಾಯಿತು. ಸ್ಟಾಲಿನ್ ಮೇ 7 ರಂದು 14 ಇವಿಎಂ ಸೆಟ್‌ಗಳ ಪರಿಶೀಲನೆಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪರಿಶೀಲನಾ ಕಾರ್ಯವು ಜುಲೈ 29 ರಂದು ಶುರುವಾಗಿ, ಆಗಸ್ಟ್ 5 ರಂದು ಪೂರ್ಣಗೊಂಡಿತು. ಚುನಾವಣಾ ಆಯೋಗದ ವಿಳಂಬವು ಚುನಾವಣೆಯನ್ನು ಪ್ರಶ್ನಿಸಲು ನಿಗದಿತ ಅವಧಿಯೊಳಗೆ ಕಾನೂನು ಪರಿಹಾರವನ್ನು ಅನುಸರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸ್ಟಾಲಿನ್ ವಾದಿಸಿದ್ದಾರೆ.
Laxmi News 24×7