Breaking News

ಖಾಸಗಿ ದ್ವಿಚಕ್ರ ವಾಹನ ಮಾಲೀಕರಿಗೆ ಬೈಕ್‌ ಟ್ಯಾಕ್ಸಿ ನಿರ್ವಹಿಸಲು ಅವಕಾಶ ಕೊಡಿ: ರಾಜ್ಯಗಳಿಗೆ ಗಡ್ಕರಿ ಮನವಿ

Spread the love

ನವದೆಹಲಿ: ಖಾಸಗಿ ದ್ವಿಚಕ್ರ ವಾಹನ ಮಾಲೀಕರು ಬೈಕ್‌ ಟ್ಯಾಕ್ಸಿ  ಸೇವೆ ನಿರ್ವಹಿಸಲು ಅವಕಾಶ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಬುಧವಾರ ಮಾತನಾಡಿದ್ದು, ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ದ್ವಿಚಕ್ರ ವಾಹನಗಳ ಮೂಲಕ ಪ್ರಯಾಣಿಕರನ್ನ ಸಾಗಿಸುವ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆ. ಆದರೆ ಕೆಲ ರಾಜ್ಯಗಳಲ್ಲಿ ಇಂತಹ ಸೇವೆಗಳಿಗೆ ಇನ್ನೂ ಅವಕಾಶ ನೀಡಲಾಗಿಲ್ಲ. ಸಾರಿಗೆ ಸೌಲಭ್ಯವು ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯ ಆಗಿರುವುದರಿಂದ, ತಮ್ಮ ತಮ್ಮ ರಾಜ್ಯಗಳಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬುದನ್ನ ರಾಜ್ಯ ಸರ್ಕಾರಗಳೇ  ನಿರ್ಧರಿಸಬೇಕು ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಸೀಮಿತವಾಗಿವೆ, ಹೀಗಿರುವಾಗ ಬೈಕ್‌ ಟ್ಯಾಕ್ಸಿ ಸೇವೆಯು ಜನರಿಗೆ ಹೊಸ ಆದಾಯದ ಮೂಲವಾಗಬಹುದು. ಖಾಸಗಿ ದ್ವಿಚಕ್ರ ವಾಹನಗಳನ್ನ ಬಳಸಿಕೊಂಡು ಜನರು ಹೆಚ್ಚುವರಿ ಆದಾಯ ಗಳಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

8 ಕೋಟಿ ಜನರಿಗೆ ಉದ್ಯೋಗ ಲಭ್ಯ
ಬೈಕ್‌ ಟ್ಯಾಕ್ಸಿ ಸೇವೆಗಳನ್ನು ಉತ್ತೇಜಿಸುವುದರಿಂದ ಸುಮಾರು 8 ಕೋಟಿ ಜನರಿಗೆ ಉದ್ಯೋಗ ಸಿಗಲಿದೆ. ಉದ್ಯೋಗಾವಕಾಶಗಳು ಕಡಿಮೆ ಇರುವ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಬೈಕ್‌ ಟ್ಯಾಕ್ಸಿ ಸೇವೆಯು ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ಸಚಿವರು ಸಲಹೆ ನೀಡಿದ್ದಾರೆ.

ಆದರೆ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಲು ಅಗತ್ಯವಿರುವ ಪರವಾನಗಿ, ವಿಮೆ ಹಾಗೂ ಇತರ ನಿಯಮಗಳು ಆಯಾ ರಾಜ್ಯಗಳ ಕಾನೂನು ಮತ್ತು ನಿಯಮಾವಳಿಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ ಕೇಂದ್ರ ಸಚಿವರ ಹೇಳಿಕೆಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳಲ್ಲೂ ತಕ್ಷಣವೇ ಬೈಕ್‌ ಟ್ಯಾಕ್ಸಿಗೆ ಅನುಮತಿ ದೊರೆಯುತ್ತವೆ ಅನ್ನೋದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಟ್ರಾಫಿಕ್‌ ರೂಲ್ಸ್‌ ಉಲ್ಲಂಗಿಸುವವರಿಗೆ ಕಡಿವಾಣ
ಮುಂದುವರಿದು ಮಾತನಾಡಿರುವ ಗಡ್ಕರಿ ಅವರು, ಸಂಚಾರ ನಿಯಮಗಳನ್ನ ಪದೇಪದೇ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ ನಡೆಸುತ್ತಿದೆ ಎಂದು ಎಚ್ಚರಿಸಿದ್ದಾರೆ.

ಹಾಗಾಗಿ ಚಾಲಕರಿಗೆ ಸುರಕ್ಷಿತ ವಾಹನ ಚಾಲನೆಯ ಕುರಿತು ಸೂಕ್ತ ಶಿಕ್ಷಣ ಮತ್ತು ತರಬೇತಿ ನೀಡುವ ಅಗತ್ಯವೂ ಇದೆ. ವಿಶೇಷವಾಗಿ ಭಾರಿ ವಾಹನಗಳು ಹಾಗೂ ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ಉಪಕರಣಗಳನ್ನ ನಿರ್ವಹಿಸುವವರಿಗೆ ಅಗತ್ಯ ತರಬೇತಿ ನೀಡಲು ಪ್ರಸ್ತುತ ಸಮರ್ಪಕ ವ್ಯವಸ್ಥೆ ಇಲ್ಲ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದ್ದಾರೆ.

ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಚಾಲಕರ ಆರೋಗ್ಯ ತಪಾಸಣೆ, ಸೂಕ್ತ ತರಬೇತಿ ಮತ್ತು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಈ ಮೂರು ಅಂಶಗಳಿಗೂ ಸಮಾನ ಮಹತ್ವ ನೀಡಬೇಕಿದೆ ಎಂದು ಕಿವಿಮಾತು ಹೇಳಿದ್ದಾರೆ.


Spread the love

About Laxminews 24x7

Check Also

ಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು

Spread the loveಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಹೊರವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ  ತಾಯಿಯೊಂದಿಗೆ ಮೂರು ತಿಂಗಳ ಮಗು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ