ಚಾಮರಾಜನಗರ: ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮೂವರ ಜೊತೆಗಿದ್ದು, ಬಳಿಕ ಪರಾರಿಯಾಗಿದ್ದ ಮಹಿಮಾ ದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದಾನೆ.
ಶೂಟೌಟ್ ನಡೆದ ವೇಳೆ ಸತ್ತ ಮೂವರ ಜೊತೆ ತೆರಳಿದ್ದ ಮಹಿಮಾ ದಾಸ್ ಎಸ್ಕೇಪ್ ಆಗಿದ್ದ. ನಂತರ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸಚಿವ ಪುಟ್ಟರಂಗಶೆಟ್ಟಿ ಕೂಡ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದರು. ಆದರೆ ಅದಾದ ಬಳಿಕ ಮಹಿಮಾದಾಸ್ ಮತ್ತೆ ನಾಪತ್ತೆಯಾಗಿದ್ದ. ಇದೀಗ ತಾನಿರುವ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದಾನೆ.
ವಿಡಿಯೋದಲ್ಲಿ ಏನಿದೆ?
ಆ.15ರಂದು ಬೆಳಗಿನ ಜಾವ 5:20 ಆಗಿತ್ತು. ಈ ವೇಳೆ ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದರು, ಕೂಡಲೇ ಶೂಟ್ ಮಾಡಿದರು. ಇದರಿಂದ ಭಯಗೊಂಡು ಓಡಿ ಹೋದೆ. 5 ನಿಮಿಷ ಆದ್ಮೇಲೆ ಯಾವುದೇ ಶಬ್ದ ಇರಲಿಲ್ಲ. ನಂಗೆ ಹುಷಾರಿರಲಿಲ್ಲ ಹೀಗಾಗಿ ನಾನು ಅಲ್ಲಿಂದ ಓಡಿ ಮನೆಗೆ ಬಂದೆ, ಬಳಿಕ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಇದೀಗ ಅರಣ್ಯ ಇಲಾಖೆಯವರು ಸಾಕ್ಷಿ ಆಗು ನನ್ನನ್ನು ಹುಡುಕುತ್ತಿದ್ದಾರೆ. ನಂಗೆ ಭಯವಾಗ್ತಿದೆ. ಪೊಲೀಸರೇ ನನಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದಾನೆ.
ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣವನ್ನ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವಂತೆ ಅಧಿಕೃತವಾಗಿ ಆದೇಶಿಸಲಾಗಿದೆ. 7 ದಿನದೊಳಗಾಗಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
Laxmi News 24×7