ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮೀನುಗಾರಿಕೆಗೆ ಎರಡು ತಿಂಗಳಿನಿಂದ ಹೇರಿದ್ದ ನಿಷೇಧವನ್ನು ಇಂದಿನಿಂದ ತೆರವುಗೊಳಿಸಲಾಗಿದೆ.
ಮೀನುಗಾರಿಕೆಗೆ ಅವಕಾಶ ನೀಡಿದ ಬೆನ್ನಲ್ಲೇ ಮೀನುಗಾರರು ತಮ್ಮ ಬೋಟುಗಳಿಗೆ ಪೂಜೆ ಸಲ್ಲಿಸಿ ಸಮುದ್ರಕ್ಕಿಳಿಯಲು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಮತ್ತೆ ಹವಾಮಾನ ವೈಪರೀತ್ಯ ಇದೀಗ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಯಿಂದಾಗಿ ಎರಡು ತಿಂಗಳುಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಲಾಗಿತ್ತು. ಇಂದಿನಿಂದ ನಿಷೇಧ ತೆರವಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಬೇಟೆಗಿಳಿಯಲು ಮೀನುಗಾರರು ಸಿದ್ದರಾಗಿದ್ದಾರೆ. ಆದರೆ ಇದೀಗ ಮತ್ತೆ ಹವಾಮಾನ ಬದಲಾವಣೆ ಆಗುತ್ತಿದ್ದು, ಸಮುದ್ರ ಕ್ಷುದ್ರವಾಗುವ ಸಾಧ್ಯತೆ ಇದೆ. ಇದಲ್ಲದೇ ಸಮುದ್ರಭಾಗದಲ್ಲಿ ಬಿಸಿಗಾಳಿ ಬೀಸಿದ್ದರಿಂದ ಈ ಬಾರಿ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದು ಕಷ್ಟ ಎನ್ನುತ್ತಾರೆ ಸಂಶೋಧಕರು. ಹೀಗಾಗಿ ಈ ಭಾರಿ ಕಳೆದ ವರ್ಷಕ್ಕಿಂತ ಕಡಿಮೆ ಆದಾಯ ಬರಲಿದ್ದು, ಉತ್ತಮ ಮೀನು ಸಿಗುವ ನಿರೀಕ್ಷೆ ಕಡಿಮೆ ಎನ್ನಲಾಗಿದೆ.
ಸದ್ಯ ಉತ್ತಮ ಮತ್ಸ್ಯ ಬೇಟೆಯ ನಿರೀಕ್ಷೆ ಹೊಂದಿರುವ ಮೀನುಗಾರರು, ಲಕ್ಷಾಂತರ ರೂಪಾಯಿ ಸುರಿದು ಬೋಟುಗಳನ್ನ ಸರಿಪಡಿಸಿಕೊಂಡು ಸಮುದ್ರಕ್ಕಿಳಿಯಲು ಸಿದ್ದವಾಗಿದ್ದಾರೆ. ಇದರ ನಡುವೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆಗಸ್ಟ್ ತಿಂಗಳ ಮೊದಲ ವಾರವೇ ಸಮುದ್ರ ಕ್ಷುದ್ರವಾಗುವ ಎಚ್ಚರಿಕೆ ನೀಡಿದೆ.
ಕಳೆದ ವರ್ಷವೂ ಕೂಡ ಸೀಸನ್‌ನಲ್ಲಿಯೇ ಹವಾಮಾನ ವೈಪರೀತ್ಯವಾಗಿ ಬೋಟುಗಳಿಗೆ ತಿಂಗಳುಗಟ್ಟಲೇ ಲಂಗುರು ಹಾಕುವಂತಾಗಿತ್ತು. ಆದರೆ ಇದೀಗ ಅದೇ ಸ್ಥಿತಿ ಮುಂದುವರೆದರೇ ಈ ಬಾರಿ ದೊಡ್ಡ ನಷ್ಟ ಎದುರಿಸಬೇಕು ಎಂದು ಮೀನುಗಾರರು ಭಯಪಡುವಂತಾಗಿದೆ. ಹೀಗಾಗಿ ರೈತರಿಗೆ ಸಾಲಮನ್ನಾ ಮಾಡಿದಂತೆ ಮತ್ಸೋದ್ಯಮಕ್ಕೂ ಸಾಲ ಮನ್ನಾ ಮಾಡಬೇಕು, ಇಲ್ಲವೇ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಹವಾಮಾನ ವೈಪರೀತ್ಯದ ನಡುವೆಯೂ ಮೀನುಗಾರರು ಎರಡು ತಿಂಗಳ ನಿಷೇಧದ ಬಳಿಕ ಸಮುದ್ರಕ್ಕಿಳಿಯಲು ಸಿದ್ಧವಾಗಿದ್ದು, ಆಗಸ್ಟ್ ತಿಂಗಳ ಮಳೆ ಮೀನುಗಾರರಿಗೆ ಅನುಕೂಲ ಮಾಡಿಕೊಡುತ್ತಾ ಅಥವಾ ಸಮಸ್ಯೆ ತಂದೊಡ್ಡಲಿದೆಯಾ ಎಂಬುದನ್ನ ಕಾದುನೋಡಬೇಕಿದೆ
Laxmi News 24×7