ಬೆಳಗಾವಿ : ಶಾಲೆ ಶಾಲೆ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಕಲಿ ವಯೋಮಿತಿ ದಾಖಲೆಗಳನ್ನು ಸಲ್ಲಿಸಿ, ಕ್ರೀಡೆಗಳಲ್ಲಿ ಪಾಲ್ಗೊಂಡು ಆ ಬಳಿಕ ಸಿಗುವ ಸೌಲಭ್ಯಗಳನ್ನು ನಿಯಮಬಾಹಿರವಾಗಿ ಪಡೆದುಕೊಳ್ಳುತ್ತಿದ್ದು, ಪ್ರತಿಯೊಂದು ಕ್ರೀಡಾಸ್ಪರ್ಧೆಯಲ್ಲೂ ವಯೋಮಿತಿ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಾಲಾ ಹಾಗೂ ವಿವಿಧ ಹಂತದ ಕ್ರೀಡಾಕೂಟಗಳಲ್ಲಿ ಕೆಲವರು ನಕಲಿ ಜನನ ಪ್ರಮಾಣಪತ್ರ ಅಥವಾ ತಪ್ಪು ದಾಖಲೆಗಳನ್ನು ಬಳಸಿ ವಯೋಮಿತಿ ನಿಯಮ ಉಲ್ಲಂಘಿಸಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದರಿಂದ ಅರ್ಹ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅನ್ಯಾಯವಾಗುತ್ತಿದೆ. ಕ್ರೀಡಾ ಸ್ಪರ್ಧೆಗಳ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆ ಇದರಿಂದ ಕುಂಠಿತವಾಗುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಹಾರಾಷ್ಟ್ರದಲ್ಲಿ ಅನುಮಾನಾಸ್ಪದ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಯೋಮಿತಿ ಹಾಗೂ ಇದಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲಯನೆಯನ್ನು ಕಡ್ಡಾಯಗೊಳಿಸಿದೆ. ಇದೇ ಮಾದರಿಯನ್ನು ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ಶಾಲಾ, ತಾಲೂಕು, ಜಿಲ್ಲಾ ಹಾಗೂ ಇತರ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲೂ ಜಾರಿಗೆ ತರಬೇಕು. ಭಾಗವಹಿಸುವ ಕ್ರೀಡಾಪಟುಗಳ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಹಾಗೂ ಶಾಲಾ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸುವುದು, ವಯಸ್ಸಿನ ಬಗ್ಗೆ ಅನುಮಾನವಿದ್ದರೆ ವಯೋಮಿತಿ ಪರೀಕ್ಷೆ ನಡೆಸುವುದು ಹಾಗೂ ನಕಲಿ ದಾಖಲೆ ಸಲ್ಲಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿಯಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ವಾಸುದೇವ ಪಾಟೀಲ, ಕುಮಾರ ಹುಬ್ಳೀಕರ, ಸೋಮನಾಥ ಘಂಟೇಕರ, ಸುಧೀರ ಮಾಲಾಯಿ ಇತರರಿದ್ದರು.
Laxmi News 24×7