ಖಾನಾಪುರ: ಇಟಗಿಯಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ದುರಸ್ತಿ ಕೈಗೊಳ್ಳಬೇಕೆಂದು ಆಗ್ರಹಿಸಿ ಗ್ರಾಮಸ್ಥರು, ಕರ್ನಾಟಕ ರಕ್ಷಣಾ ವೇದಿಕೆ, ನೇಗಿಲಯೋಗಿ ಸುರಕ್ಷಾ ರೈತ ಸಂಘ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ವತಿಯಿಂದ ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಕೈಗೊಂಡರು. ಗ್ರಾಮದಲ್ಲಿ ಎಲ್ಲ ಅಂಗಡಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ವ್ಯಾಪಾರಸ್ಥರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಳಿಕ ಬ್ಯಾಂಕ್, ವಿವಿಧ ಸಂಘ-ಸಂಸ್ಥೆಗಳ ಕಚೇರಿ ಬಂದ್ ಮಾಡಲಾಯಿತು.
ಬೋಗೂರು, ಇಟಗಿ ಕ್ರಾಸ್, ಚಿಕ್ಕಮುನವಳ್ಳಿ, ಹಿರೇಮುನವಳ್ಳಿ, ಕರವಿನಕೊಪ್ಪ, ತೋಲಗಿ, ಗಂದಿಗವಾಡ, ಹಂದೂರ, ಹುಲಿಕೊತ್ತಲ ಹಾಗೂ ಗುಂಡ್ಯಾನಟ್ಟಿ ಸೇರಿದಂತೆ ವಿವಿಧ ಗ್ರಾಮಸ್ಥರು ಪ್ರತಿಭಟನೆಗೆ ಸಾಥ್ ನೀಡಿದರು. ಜಿಟಿ ಜಿಟಿ ಮಳೆ ಮಧ್ಯೆಯೂ ಪ್ರತಿಭಟನೆಕಾರರು ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚಿದರು. ರಸ್ತೆಯ ತಗ್ಗು-ಗುಂಡಿಗಳಲ್ಲಿ ಸಸಿ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತ ಪ್ರವೀಣ ಹುಲಿಜಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸಂಜಯ ಗಸ್ತಿ ಹಾಗೂ ತಹಸೀಲ್ದಾರ್ ದುಂಡಪ್ಪ ಕೋಮಾರ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನಾನಿರತರ ಸಮಸ್ಯೆ ಆಲಿಸಿ ಶೀಘ್ರವೇ ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೋಗ್ಯಪ್ಪ ಪಾದನಕಟ್ಟಿ, ತಾಲೂಕಾಧ್ಯಕ್ಷ ವಿಠ್ಠಲ ಹಿಂಡಲಕರ, ಉಪಾಧ್ಯಕ್ಷ ಭರತೇಶ ಜೋಳದ, ಮಡಿವಾಳಿ ಭೂಪಣ್ಣಿ, ಬಿಷ್ಟಪ್ಪ ಬನೋಶಿ, ರವಿ ಮಾದಿಗರ, ದಿಗಂಬರ ನಾಯಿಕ, ನೇಗಿಲಯೋಗಿ ಸುರಕ್ಷಾ ರೈತ ಸಂಘದ ಕಾರ್ಯಾಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾಧ್ಯಕ್ಷ ರುದ್ರಗೌಡ ಪಾಟೀಲ, ಮುಖಂಡರಾದ ಕೇದಾರಿ ಸೋನಪ್ಪನವರ, ವಿಠ್ಠಲ ಕಿಳೋಜಿ, ರಾಯಪ್ಪ ಬಳಗಪ್ಪನವರ, ಎಂ.ಜಿ.ಹಿರೇಮಠ, ಕಲ್ಮೇಶ ಮುತನಾಳ, ಭೀಮಶಿ ಹಾಗೂ ವಿವಿಧ ಗ್ರಾಮಸ್ಥರು ಇದ್ದರು.
Laxmi News 24×7