ಬೆಂಗಳೂರು: ರಾಜ್ಯದಲ್ಲಿ ಸದ್ಯದಲ್ಲೇ ಜಾರಿಗೆ ಬರಲಿರುವ 2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಸಮರ ಸಾಧನಗಳು, ಎಂಬೆಡೆಡ್ ತಂತ್ರಾಂಶ, ಇ-ವಿಟಾಲ್ ಸಾಧನಗಳು, ಬಾಹ್ಯಾಕಾಶ ಕ್ಷೇತ್ರದಲ್ಲಿ ಬಳಸಲಾಗುವ ಪೇಲೋಡ್ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮಗ್ರ ಕ್ಲಸ್ಟರುಗಳನ್ನು ಅಭಿವೃದ್ಧಿಪಡಿಸಲು ಒತ್ತು ಕೊಡಲಾಗಿದೆ. ಜೊತೆಗೆ ಈ ವರ್ಷದ ಡಿಸೆಂಬರ್ ಹೊತ್ತಿಗೆ ಕ್ವಿನ್ ಸಿಟಿ ಹಂತ-1ರಲ್ಲಿ 200 ಎಕರೆ ವಿಸ್ತಾರದ ಸೆಮಿಕಂಡಕ್ಟರ್ ಪಾರ್ಕ್ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದರು.
ಗುರುವಾರ (ಜು.23) ಇಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾದ 15ನೇ ವರ್ಷದ ವ್ಯೂಹಾತ್ಮಕ ವಿದ್ಯುನ್ಮಾನ ಸಮಾವೇಶದಲ್ಲಿ (ಸ್ಟ್ರಾಟೆಜಿಕ್ ಎಲೆಕ್ಟ್ರಾನಿಕ್ಸ್ ಸಮ್ಮಿಟ್-2026) ಅವರು ಮಾತನಾಡಿದರು.
ರಾಜ್ಯದಲ್ಲಿ ಕೇವಲ ತಯಾರಿಕೆ ಆದರೆ ಮಾತ್ರ ಸಾಲದು. ಕಂಪನಿಗಳು ಇಲ್ಲೇ ವಿನ್ಯಾಸ, ಅಭಿವೃದ್ಧಿ, ಮೂಲ ಮಾದರಿಗಳು (ಪ್ರೋಟೋಟೈಪ್), ಪರೀಕ್ಷೆ, ಪ್ರಮಾಣೀಕರಣ, ರಫ್ತು ವಹಿವಾಟು ಎಲ್ಲವೂ ನಡೆಯುವಂತಾಗಬೇಕು. ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಉದ್ಯಮಿಗಳ ಜೊತೆ ಕೈಗೂಡಿಸಲು ಸಿದ್ಧವಿದೆ. ಆದ್ದರಿಂದ ಸೆಮಿಕಂಡಕ್ಟರ್ ಮಿಷನ್ 2.0ಯನ್ನು ಕರ್ನಾಟಕದ ಮೂಲಕ ನನಸು ಮಾಡಬೇಕು ಎಂದು ಕರೆ ಕೊಟ್ಟರು.
ರಾಜ್ಯವು ಸಂಶೋಧನೆ, ಡೀಪ್-ಟೆಕ್ ವಿನ್ಯಾಸ ಮತ್ತು ಎಕ್ವಿಪ್ಮೆಂಟ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆಯಲ್ಲಿ ಜಿಸಿಸಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ. ಇದರಾಚೆಗೆ, ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಚಿಪ್ ವಿನ್ಯಾಸ ಸಂಸ್ಥೆಗಳು ಮತ್ತು 3 ನ್ಯಾನೋಮೀಟರ್ ವಿನ್ಯಾಸ ಕೇಂದ್ರಗಳು ಸಕ್ರಿಯವಾಗಿವೆ. ಉದ್ಯಮಿಗಳು ಇವೆಲ್ಲವನ್ನೂ ಸಕಾರಾತ್ಮಕವಾಗಿ ಪರಿಗಣಿಸಿ, ಹೂಡಿಕೆಗೆ ಮುಂದಾಗಬೇಕು ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಎಲ್ಸೀನಾ ವರದಿ-26 ವರದಿಯನ್ನು ಬಿಡುಗಡೆ ಮಾಡಿದರು. ಕರ್ನಲ್ ಲಾಕ್ಯಾಜೀತ್ ಸಿಂಗ್ ಚವ್ಹಾಣ್ ಅವರು ಭವಿಷ್ಯದ ಡ್ರೋನ್ ಮತ್ತು ತಂತ್ರಜ್ಞಾನ ಕುರಿತು ಬರೆದಿರುವ ವಿಂಗ್ಸ್ ಆಫ್ ಅಸ್ತ್ರ ಪುಸ್ತಕವನ್ನೂ ಬಿಡುಗಡೆ ಮಾಡಿದರು.
ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರದ (ಸಿ-ಡಾಟ್) ಸಿಇಒ ಡಾ.ರಾಜಕುಮಾರ್ ಉಪಾಧ್ಯಾಯ, ಬಿಇಎಲ್ ಸಿಇಒ ಮನೋಜ್ ಜೈನ್, ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಸುಶೀಲ್ ಪಾಲ್, ಡಿ.ಆರ್.ಡಿ.ಓ ಮಹಾನಿರ್ದೇಶಕ ಡಾ.ಬಿ ಕೆ ದಾಸ್, ಲೆ.ಜ. ರಾಜೀವ್ ಸಾಹ್ನಿ ಅವರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಈ ವೇಳೆ ಎಲ್ಸಿನಾ ಸಂಘಟನೆಯ ಅಧ್ಯಕ್ಷ ಡಾ.ಶಶಿಕುಮಾರ್ ಜೆನ್ದಾಮ್ ಉಪಸ್ಥಿತರಿದ್ದರು.
Laxmi News 24×7