ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲಗಳ ಮೇಲೆ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಬುಧವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಕುಟುಂಬಗಳಿಗೆ ಸೇರಿದ ಎರಡು ಮನೆಗಳನ್ನು ಸೇನೆ ನೆಲಸಮಗೊಳಿಸಿದೆ.
ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿದ್ದರು. ಇದಾದ ಬೆನ್ನಲ್ಲೇ ಸೇನೆ ಉಗ್ರರ ವಿರುದ್ಧದ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ. ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಲಷ್ಕರ್ ಭಯೋತ್ಪಾದಕ ಹರೂನ್ ರಶೀದ್ ಕುಟುಂಬಕ್ಕೆ ಸೇರಿದ ಮತ್ತೊಂದು ಮನೆಯನ್ನು ಕೆಡವಲಾಗಿದೆ. ಹರೂನ್ ಮತ್ತು ಆದಿಲ್ನ ಮನೆ ಕೆಡವಲಾಗಿದ್ದು, ಇಬ್ಬರೂ 2018 ರಿಂದ ಸಕ್ರಿಯ ಭಯೋತ್ಪಾದಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ (ಜು.22) ಮಧ್ಯಾಹ್ನ ಅನಂತನಾಗ್ನ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹೆಡ್ ಕಾನ್ಸ್ಟೆಬಲ್ ಆಶಿಕ್ ಅಹ್ಮದ್ ಖುರೇಷಿ ಹುತಾತ್ಮರಾಗಿದ್ದರು. ಈ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾಶ್ಮೀರದಾದ್ಯಂತ ಶೋಧ ಕಾರ್ಯಾಚರಣೆ ನಡೆಸಿ ನೂರಾರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀನಗರ ಜಿಲ್ಲೆಯಲ್ಲಿ ಸುಮಾರು 2,000 ಶಂಕಿತ ಓವರ್ಗ್ರೌಂಡ್ ವರ್ಕರ್ಸ್ (ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವವರು) ವಶಕ್ಕೆ ಪಡೆಯಲಾಗಿದೆ. ಬಾರಾಮುಲ್ಲಾ ಜಿಲ್ಲಾ ಪೊಲೀಸರು 178 ಶಂಕಿತರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನಂತನಾಗ್ನಲ್ಲಿ ಉಗ್ರರ ಸ್ಥಳೀಯ ನೇಮಕಾತಿ ಬಹುತೇಕ ಶೂನ್ಯಕ್ಕೆ ಇಳಿದಿದೆ. ಸ್ಥಳೀಯ ಯುವಕರು ಭಯೋತ್ಪಾದಕ ಗುಂಪುಗಳಿಗೆ ಸೇರುತ್ತಿರುವ ಬಗ್ಗೆ ಯಾವುದೇ ಪ್ರಕರಣಗಳು ಇತ್ತೀಚೆಗೆ ದಾಖಲಾಗಿಲ್ಲ. ಪಾಕಿಸ್ತಾನದಿಂದ ನುಸುಳುತ್ತಿರುವ ಭಯೋತ್ಪಾದಕರಿಗೆ ಸ್ಥಳೀಯ ಉಗ್ರರು ಸಹಕರಿಸುತ್ತಿದ್ದು ಭದ್ರತೆಗೆ ಸವಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7