ಧಾರವಾಡ: ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಕೆಟ್ಟ ತಾಯಿ ಇರಲಾರಳು ಎಂಬ ಮಾತಿದೆ. ಆದರೆ, ಈ ಮಾತಿಗೆ ತದ್ವಿರುದ್ಧವಾದ ಘಟನೆಯೊಂದು ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಬಾರಾಕೊಟ್ರಿಯಲ್ಲಿರುವ ಅಪಾರ್ಟ್ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಡಾ.ಕಿರಣ್ ಹೊನ್ನಣ್ಣವರ (45) ಎಂಬುವವರ ಭೀಕರ ಕೊಲೆ ನಡೆದಿದೆ. ಅಲ್ಲದೇ ಕಿರಣ್ ಅವರ ಪುತ್ರ ನಿಹಿತ್ ಎಂಬ ಎಂಟು ವರ್ಷದ ಮಗುವಿನ ಮೇಲೂ ಭೀಕರ ಚಾಕು ದಾಳಿ ನಡೆದಿದ್ದು, ಇದೀಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಈ ಎಲ್ಲ ಘಟನೆ ಹಿಂದೆ ಯಾವುದೇ ರೌಡಿಗಳಿಲ್ಲ, ಯಾವುದೇ ಮಾಫಿಯಾ ಇಲ್ಲ ಬದಲಿಗೆ ಈ ಕೃತ್ಯ ಎಸಗಿದ್ದು ಸ್ವತಃ ಡಾ.ಕಿರಣ್ ಅವರ ಪತ್ನಿ, ಮಗುವಿನ ತಾಯಿ ಪ್ರಿಯಾಂಕಾ ಇದ್ದಾಳೆ ಎಂಬ ಆರೋಪವಿದೆ.
ಕಳೆದ 10-12 ವರ್ಷಗಳಿಂದ ಡಾ.ಕಿರಣ್ ಹೊನ್ನಣ್ಣವರ ಅವರು ತಮ್ಮ ಪತ್ನಿ ಪ್ರಿಯಾಂಕಾ ಹಾಗೂ ಪುತ್ರ ನಿಹಿತ್ ಜೊತೆ ಧಾರವಾಡದ ಅಪಾರ್ಟ್ಮೆಂಟ್‌ನ ಮನೆಯೊಂದರಲ್ಲಿ ವಾಸವಾಗಿದ್ದರು. ಡಾ.ಕಿರಣ್ ಅವರು ಆಸ್ಪತ್ರೆಯೊಂದರಲ್ಲಿ ಅರವಳಿಕೆ ತಜ್ಞರಾಗಿ ಕೆಲಸ ನಿರ್ವಹಿಸಿದರೆ, ಪತ್ನಿ ಪ್ರಿಯಾಂಕಾ ಕೂಡ ವೈದ್ಯೆಯಾಗಿದ್ದರು. ಪುತ್ರ ನಿಹಿತ್ ತುಸು ಬುದ್ಧಿಮಾಂದ್ಯನಾಗಿದ್ದ. ಈ ಕುಟುಂಬದ ಮಧ್ಯೆ ಅದ್ಯಾವ ಬಿರುಕು ಇತ್ತೋ ಗೊತ್ತಿಲ್ಲ. ಸ್ವತಃ ಪತ್ನಿಯೇ ತನ್ನ ಪತಿಯ ಉಸಿರು ನಿಲ್ಲಿಸಿದ್ದಾಳೆ. ಅಲ್ಲದೇ ತಾನು ಹೆತ್ತ ಕರುಳು ಎಂಬುದನ್ನೂ ನೋಡದೇ ತನ್ನ ಎಂಟು ವರ್ಷದ ಮಗುವಿನ ಮೇಲೆ ರೌದ್ರಾವತಾರ ತೋರಿದ್ದಾಳೆ ಎನ್ನಲಾಗುತ್ತಿದೆ.
ಕೌಟುಂಬಿಕ ಕಲಹವೋ ಏನೋ ದಂಪತಿ ಮಧ್ಯೆ ಕಳೆದ ರಾತ್ರಿ ಜಗಳ ನಡೆದಿದೆ. ರಾತ್ರಿ ಪತಿ ಹಾಗೂ ಪುತ್ರ ಮಲಗಿದ ವೇಳೆ ಅವರ ಮೇಲೆ ಪತ್ನಿ ಪ್ರಿಯಾಂಕಾ ಚಾಕುವಿನಿಂದ ದಾಳಿ ನಡೆಸಿದ್ದಾಳೆ. ತನ್ನ ಮಗನ ಮೇಲೂ ಚಾಕು ದಾಳಿ ನಡೆಸಿದ ಪಾಪಿ ತಾಯಿ, ತನ್ನ ಪತಿಯನ್ನು ಕೊಲೆ ಮಾಡಿ ಅದೇ ಶವದ ಪಕ್ಕವೇ ರಾತ್ರಿಯಿಡೀ ಕುಳಿತಿದ್ದಾಳೆ. ಯಾರೇ ಡಾ.ಕಿರಣ್‌ಗೆ ಫೋನ್ ಮಾಡಿದರೂ ಅವರು ರೆಸ್ಟ್ ಮಾಡುತ್ತಿದ್ದಾರೆ ಎಂಬ ಸಬೂಬು ನೀಡಿದ್ದಾಳೆ. ತನ್ನ ಮಗು ರಕ್ತದ ಮಡುವಿನಲ್ಲಿ ಬಿದ್ದು ಉಸಿರೆಳೆಯುತ್ತಿದ್ದರೂ ನೋಡ ತಾಯಿ, ಬೆಡ್ ಮೇಲೆ ಕುಳಿತು ಮೊಬೈಲ್ ನೋಡುತ್ತಾ ಕುಳಿತಿದ್ದಾಳೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಪತಿ, ಮಗನ ಕೊಲೆಗೈದು ಹುಚ್ಚಿ ತರ ಕುಳಿತಿದ್ದ ಪ್ರಿಯಾಂಕಾ:
ಬುಧವಾರ (ಜು.15) ಮಧ್ಯಾಹ್ನದವರೆಗೂ ಡಾ.ಕಿರಣ್ ಅವರ ಸಂಬಂಧಿಕರು ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸಿರಲಿಲ್ಲ. ಅವರ ಸಂಬAಧಿಕರು ಸಂಶಯಗೊಂಡು ಧಾರವಾಡಕ್ಕೆ ಬಂದು ಮನೆಯ ಕದ ತಟ್ಟಿದರೂ ಆಕೆ ಕದ ತೆರೆದಿರಲಿಲ್ಲ. ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದು ಬಳಿಕ ಕದ ತೆರೆದು ನೋಡಿದಾಗ ಅಲ್ಲಿ ಕೊಲೆ ನಡೆದಿರುವುದು ಗೊತ್ತಾಗಿದೆ. ಸ್ವತಃ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ನೋಡಿದಾಗ ಡಾ.ಕಿರಣ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ನಿಹಿತ್ ತುಸು ಉಸಿರಾಡುತ್ತಿದ್ದ. ಕೂಡಲೇ ಪೊಲೀಸ್ ಆಯುಕ್ತರೇ ಆ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದರು.ಇದನ್ನೂ ಓದಿ:
ಎಲ್ಲರೂ ಮನೆಯೊಳಗೆ ಹೋದಾಗ ಪ್ರಿಯಾಂಕಾ ಮಾತ್ರ ಹುಚ್ಚಿಯಂತೆ ಬೆಡ್ ಮೇಲೆ ಕುಳಿತಿದ್ದಳು. ಅಲ್ಲದೇ ಬೆಡ್ ಮೇಲೆ ಇಂಜಕ್ಷನ್ ಹಾಗೂ ವಿವಿಧ ಔಷಧಿಗಳು ಕೂಡ ಪತ್ತೆಯಾಗಿವೆ. ಕಿರಣ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ನಾವೇ ಸ್ಥಳಕ್ಕೆ ಬಂದು ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ ಎಂದು ಕಿರಣ್ ಮಾವ ರಾಜು ಕಣ್ಣೀರು ಹಾಕಿದ್ದಾರೆ.
ಪತಿಯ ಪಾಲಿಗೆ ಪತ್ನಿಯೇ ರಾಕ್ಷಸಿಯಾಗಿದ್ದು ಒಂದೆಡೆಯಾದರೆ, ಮಗನ ಜೀವಕ್ಕೆ ತಾಯಿಯೇ ಕುತ್ತು ತಂದಿರುವುದು ವಿಪರ್ಯಾಸ. ಸದ್ಯ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
Laxmi News 24×7