Breaking News

ಮುಂದಿನ ಮೂರು ವರ್ಷಗಳಲ್ಲಿ 100% ಎಬಿಸಿ ಗುರಿ ಸಾಧಿಸಲು ಕಾರ್ಯಸೂಚಿ ಸಿದ್ಧಪಡಿಸಿ: ಕೃಷ್ಣ ಬೈರೇಗೌಡ

Spread the love

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಶೇ.100 ಎಬಿಸಿ  ಕಾರ್ಯ ಪೂರ್ಣಗೊಳಿಸಲು ಸಮಗ್ರ ಕಾರ್ಯಸೂಚಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಜಿಬಿಎ ವ್ಯಾಪ್ತಿಯಲ್ಲಿ ಪಶುಸಂಗೋಪನೆ ಹಾಗೂ ನಗರದಲ್ಲಿ ಸಸಿ ನೆಡುವುದಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಕಳೆದ 50 ವರ್ಷಗಳಿಂದ ಪರಿಹರಿಸಲು ಹಲವು ಪ್ರಯತ್ನಗಳು ನಡೆದಿದ್ದರೂ, ಸಮಸ್ಯೆ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ನಾಗರಿಕರ ಆತಂಕ ಮತ್ತು ಅಭಿಪ್ರಾಯಗಳಿಗೆ ಸರ್ಕಾರವೂ ಸ್ಪಂದಿಸುತ್ತಿದ್ದು, ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ 2000ನೇ ಸಾಲಿನಿಂದಲೇ ಎಬಿಸಿ ಕಾರ್ಯ ಆರಂಭವಾಗಿದೆ. 2007ರಲ್ಲಿ ಬಿಬಿಎಂಪಿ ರಚನೆಯಾದ ಬಳಿಕ ಇದುವರೆಗೆ ಸುಮಾರು 8.80 ಲಕ್ಷ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2019ರ ಸಮೀಕ್ಷೆ ಪ್ರಕಾರ ನಗರದಲ್ಲಿ 3.10 ಲಕ್ಷ ಹಾಗೂ 2023ರ ಅಂದಾಜು ಪ್ರಕಾರ 2.79 ಲಕ್ಷ ಬೀದಿ ನಾಯಿಗಳಿವೆ. 2016ರಿಂದ 2023ರವರೆಗೆ 3.33 ಲಕ್ಷ ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ. ಆದರೂ, ಬೀದಿ ನಾಯಿಗಳ ಸಂಖ್ಯೆಯಲ್ಲಿ ನಿರೀಕ್ಷಿತ ಇಳಿಕೆ ಕಂಡುಬಂದಿಲ್ಲ. ಇದೇ ರೀತಿಯಲ್ಲಿ ಮುಂದುವರಿದರೆ ಇನ್ನೂ ಹಲವು ವರ್ಷಗಳಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಕಟ್ಟುನಿಟ್ಟಿನ ಕಾರ್ಯತಂತ್ರ ರೂಪಿಸಿ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಸೂಚಿಸಲಾಗಿದೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಎಬಿಸಿ ಶಸ್ತ್ರಚಿಕಿತ್ಸೆಗಾಗಿ ಸುಮಾರು 42 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಬೀದಿ ನಾಯಿಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ವರ್ಷಕ್ಕೆ 90 ಸಾವಿರ ನಾಯಿಗಳಿಗೆ ಎಬಿಸಿ ಮಾಡಿ:
ಪ್ರಸ್ತುತ ವರ್ಷಕ್ಕೆ ಸುಮಾರು 45 ಸಾವಿರ ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಅಗತ್ಯ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸಿ ಈ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ ವರ್ಷಕ್ಕೆ 90 ಸಾವಿರ ನಾಯಿಗಳಿಗೆ ಎಬಿಸಿ ನಡೆಸುವ ಗುರಿ ಹೊಂದಲಾಗಿದೆ. ಈ ರೀತಿಯಾಗಿ ಮೂರು ವರ್ಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ನಗರದಲ್ಲಿ ಶೇ.100 ಎಬಿಸಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಸಾಮರ್ಥ್ಯ ಹೆಚ್ಚಳಕ್ಕೆ ಸೂಚನೆ:
ಎಬಿಸಿ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಸಂಸ್ಥೆಗಳನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾಗರಿಕರಲ್ಲಿ ಜಾಗೃತಿ ಮೂಡಿಸಿ, ಆಸಕ್ತಿ ಹೊಂದಿರುವ ಸಂಸ್ಥೆಗಳು ಹಾಗೂ ಸಂಘಟನೆಗಳನ್ನು ಈ ಕಾರ್ಯದಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸಬೇಕು. ಬೆಂಗಳೂರು ನಗರದ ಸಂಸ್ಥೆಗಳ ಜೊತೆಗೆ ಇತರೆ ನಗರಗಳ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಿ ಕಾರ್ಯಸಾಮರ್ಥ್ಯ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ:
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರ ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಂಡು ಎಬಿಸಿ ಶಸ್ತ್ರಚಿಕಿತ್ಸೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಸಿ ನೆಡುವ ಯೋಜನೆ:
ಪ್ರಸಕ್ತ ಸಾಲಿನಲ್ಲಿ 64,130 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಭಾಗಿತ್ವದಲ್ಲಿ ಸಸಿ ನೆಟ್ಟು ಅವುಗಳ ಪೋಷಣೆಗೆ ಆದ್ಯತೆ ನೀಡಬೇಕು. ಈ ಸಂಬಂಧ ಪ್ರತಿಯೊಂದು ಪಾಲಿಕೆಯೂ ಸಮಗ್ರ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಗಿಡ ನೆಡುವಲ್ಲಿ ನಾಗರಿಕರಿಗೆ ಮೊದಲ ಆದ್ಯತೆ:
ನಗರದಲ್ಲಿ ಸಸಿ ನೆಡುವ ಕಾರ್ಯದಲ್ಲಿ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಅಗತ್ಯವಿರುವ ಸಸಿಗಳ ಕುರಿತು ಮನವಿ ಸಲ್ಲಿಸಿದರೆ, ಅವುಗಳನ್ನು ಪೂರೈಸಿ ನೆಡುವ ವ್ಯವಸ್ಥೆ ಮಾಡಲಾಗುವುದು. ಬಳಿಕ ರಸ್ತೆ ಬದಿ ಹಾಗೂ ಕೆರೆಗಳ ಸುತ್ತಮುತ್ತ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗುವುದು. ಇದರ ಮೇಲ್ವಿಚಾರಣೆಗಾಗಿ ಸಹಾಯಕ ಅಭಿಯಂತರರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಹೇಳಿದರು.

ಸಸಿ ನೆಟ್ಟ ಮಾಹಿತಿಯಲ್ಲಿ ಸ್ಪಷ್ಟತೆ ಇಲ್ಲ:
2008ರಿಂದ ಇದುವರೆಗೆ ಸುಮಾರು 20 ಲಕ್ಷ ಸಸಿಗಳನ್ನು ನೆಟ್ಟಿರುವುದಾಗಿ ದಾಖಲೆಗಳಿವೆ. ಆದರೆ ಮರಗಳ ಗಣತಿ ಪ್ರಕಾರ ಶೇ.85ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಸುಮಾರು 11 ಲಕ್ಷ ಮರಗಳು ಮಾತ್ರ ಇರುವ ಸಾಧ್ಯತೆ ಕಂಡುಬಂದಿದೆ. ಉಳಿದ ಸಸಿಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಪ್ರತಿಯೊಂದು ಸಸಿ ನೆಡುವ ಕಾರ್ಯಕ್ಕೂ ಸಂಪೂರ್ಣ ಉತ್ತರದಾಯಿತ್ವ ಮತ್ತು ದಾಖಲೆ ನಿರ್ವಹಣೆ ಕಡ್ಡಾಯವಾಗಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಒಂದು ಸಸಿ ನೆಡಲು ಸುಮಾರು 2,300 ರೂ. ವೆಚ್ಚ:
ಒಂದು ಸಸಿ ನೆಡುವ ಪ್ರಕ್ರಿಯೆಯಲ್ಲಿ ಗುಂಡಿ ತೋಡುವುದು, ಮುಚ್ಚುವುದು, ಸಸಿ ಖರೀದಿ, ರಕ್ಷಣಾ ಕವಚ ಅಳವಡಿಕೆ, ಕಡ್ಡಿ ಅಳವಡಿಕೆ, ನೀರುಣಿಸುವುದು, ಕಾವಲು, ಮೂರು ವರ್ಷಗಳ ನಿರ್ವಹಣೆ ಹಾಗೂ ಇತರೆ ವೆಚ್ಚಗಳನ್ನು ಸೇರಿ ಸುಮಾರು 2,300 ರೂ. ವ್ಯಯವಾಗುತ್ತದೆ. ಬದಲಿ ಸಸಿ ನೆಡುವ ಕಡ್ಡಾಯ ಅರಣ್ಯೀಕರಣ ಯೋಜನೆಯಲ್ಲಿ ಪ್ರತಿ ಸಸಿಗೆ ಸುಮಾರು 3,108 ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಯಮಾನುಸಾರ ಗುಂಡಿ ಅಗೆದು ಸಸಿ ನೆಡಬೇಕು:
ಸಸಿ ನೆಡುವ ಸಂದರ್ಭದಲ್ಲಿ 2.5 ಅಡಿ ಉದ್ದ, 2.5 ಅಡಿ ಅಗಲ ಹಾಗೂ 2.5 ಅಡಿ ಆಳದ ಗುಂಡಿ ಅಗೆದು ನೆಡಬೇಕು. ಆದರೆ ಕೆಲವೆಡೆ ಪಾದಚಾರಿ ಮಾರ್ಗದ ಪೇವರ್ಸ್ ತೆಗೆದು ಸಸಿ ನೆಡುವುದು ಕಂಡುಬಂದಿದೆ. ಇಂತಹ ಕ್ರಮ ನಿಯಮಬಾಹಿರವಾಗಿದ್ದು, ಮುಂದಿನ ದಿನಗಳಲ್ಲಿ ನಿಯಮಾನುಸಾರವೇ ಸಸಿ ನೆಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

‘ಸಹಾಯ’ ತಂತ್ರಾಂಶದ ಮೂಲಕ ದೂರು ಸಲ್ಲಿಸಿ:
ಅಪಾಯದ ಸ್ಥಿತಿಯಲ್ಲಿರುವ ಮರಗಳು, ಒಣಗಿದ ಕೊಂಬೆಗಳು ಅಥವಾ ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಮರಗಳ ಕುರಿತು ನಾಗರಿಕರು ‘ಸಹಾಯ’ ತಂತ್ರಾಂಶದ ಮೂಲಕ ದೂರು ಸಲ್ಲಿಸಬೇಕು. ದೂರುಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗುವುದು. ಆನ್‌ಲೈನ್ ಮೂಲಕ ದೂರು ಸಲ್ಲಿಸಿದರೆ ಅವುಗಳ ಪ್ರಗತಿಯನ್ನು ಸುಲಭವಾಗಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪಾದಚಾರಿ ಮಾರ್ಗ ಒತ್ತುವರಿ ತೆರವು; ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿಲ್ಲ:
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಯಾರನ್ನೂ ಒಕ್ಕಲೆಬ್ಬಿಸುವ ಕೆಲಸವಲ್ಲ. ನಗರದಲ್ಲಿ ಸುಮಾರು ಶೇ.20ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಬೀದಿ ವ್ಯಾಪಾರ ಮಾಡದಂತೆ ಮನವಿ ಮಾಡಲಾಗಿದೆ. ಉಳಿದ ಶೇ.80ರಷ್ಟು ರಸ್ತೆಗಳಲ್ಲಿ ವ್ಯಾಪಾರ ನಡೆಸಲು ಅವಕಾಶವಿದೆ. ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸಲು ಎಲ್ಲರೂ ಸಹಕರಿಸಬೇಕು. ಅಂಗಡಿ ಮುಂಭಾಗದಲ್ಲಿ ಅಕ್ರಮ ಒತ್ತುವರಿ ಮಾಡಿಕೊಂಡಿರುವವರು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಿಯಮಾನುಸಾರ ತೆರವುಗೊಳಿಸಿ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ವಿಶೇಷ ಆಯುಕ್ತ ವೆಂಕಟಾ ಚಲಪತಿ, ಅರಣ್ಯ ವಿಭಾಗ, ಪಶುಪಾಲನಾ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ