ಉಡುಪಿ: ಇಂದು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಆಗಮಿಸಲಿದ್ದು, ಈ ವೇಳೆ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ತಮಿಳುನಾಡಿನ ಎಂಜಿಆರ್ ಹಾಗೂ ಜಯಲಲಿತಾ ಭೇಟಿ ಬಳಿಕ ಇದೀಗ ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆಯಲಿದ್ದಾರೆ. ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುವ ಸಾಧ್ಯತೆಯಿದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದರ್ಶನ ಪಡೆಯುವ ಸಾಧ್ಯತೆ ಇದೆ. ತಮಿಳುನಾಡು ಪೊಲೀಸರು ಈಗಾಗಲೇ ಕೊಲ್ಲೂರಿನಲ್ಲಿ ಬೀಡುಬಿಟ್ಟಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಸಿಎಂ ವಿಜಯ್ ಭೇಟಿ ಹಿನ್ನೆಲೆ ದೇವಸ್ಥಾನದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಇರುವುದಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ವಿಶೇಷ ಭದ್ರತಾ ವ್ಯವಸ್ಥೆ ಇರುವುದರಿಂದ ಭಕ್ತರು ದರ್ಶನಕ್ಕೆ ಬಾರದಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಕೊಲ್ಲೂರು ದೇವಸ್ಥಾನ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ತಮಿಳುನಾಡು ಪೊಲೀಸರೊಂದಿಗೆ ಉಡುಪಿ ಪೊಲೀಸರು ಭದ್ರತೆ ವಹಿಸಿದ್ದಾರೆ.
ಈ ನಡುವೆ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸರ್ಕಾರದ ನಿಲುವು ಕನ್ನಡಿಗರ ಸಿಟ್ಟನ್ನ ನೆತ್ತಿಗೇರಿಸಿದೆ. ತಮಿಳುನಾಡು ಸಿಎಂ ಜೋಸೆಫ್ ವಿಜಯ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಕಪ್ಪು ಬಾವುಟ ಪ್ರದರ್ಶನ ಮಾಡಲು ಮುಂದಾಗಿದೆ. ಉಡುಪಿ ಜಿಲ್ಲೆಯ ಮೂಲಕ ಕೊಲ್ಲೂರಿಗೆ ತೆರಳುವ ಮಾರ್ಗದಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಸಿದ್ದತೆ ಮಾಡಿಕೊಂಡಿದೆ. ಹೀಗಾಗಿ ಉಡುಪಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಎಂಜಿಆರ್ ಮೂಕಾಂಬಿಕೆಯ ಪರಮ ಭಕ್ತರಾಗಿದ್ದರು. ದೇವಿಗೆ ಭಕ್ತಿಯ ಕಾಣಿಕೆಯಾಗಿ ಸಮರ್ಪಿಸಿದ ಚಿನ್ನದ ಖಡ್ಗ ಇಂದಿಗೂ ಉತ್ಸವಗಳ ಸಂದರ್ಭದಲ್ಲಿ ಬಳಕೆಯಾಗುತ್ತಿದೆ. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ 2004ರಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ, ಅನ್ನಸಂತರ್ಪಣೆಗಾಗಿ ದೇಣಿಗೆ ನೀಡಿದ್ದರು. ದೇವಿಗೆ ಪ್ರಿಯವಾದ ಚಂಡಿಕಾ ಹೋಮವನ್ನು ಜಯಲಲಿತಾ ಮಾಡಿಸಿದ್ದರು. ತಮ್ಮ ರಾಜಕೀಯ ಗುರು ಎಂಜಿಆರ್ ಸಮರ್ಪಿಸಿದ್ದ ಚಿನ್ನದ ಖಡ್ಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ತಮಿಳುನಾಡು ಸಿಎಂ ವಿಜಯ್ ಮೊದಲ ಬಾರಿಗೆ ಮೂಕಾಂಬಿಕೆಗೆ ಪೂಜೆ ಸಲ್ಲಿಸಲಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ಶಕ್ತಿ ಪೀಠಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ಮೂಕಾಂಬಿಕಾ ದೇವಸ್ಥಾನ ಭಕ್ತಿಯ ಜೊತೆಗೆ ಇತಿಹಾಸ ಮತ್ತು ವೈಭವದ ಸಂಕೇತವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿಗೆ ಬಂದು ಹೋದರೇ ಕಷ್ಟಗಳು, ಸವಾಲುಗಳು ಸಲೀಸಾಗಿ ನಿವಾರಣೆ ಆಗುತ್ತೆ ಅನ್ನೋದು ಎಲ್ಲರ ನಂಬಿಕೆ. ಹೀಗಾಗಿ ಮುಖ್ಯಮಂತ್ರಿಗಳು, ಸಿನಿಮಾ ಮತ್ತು ಸಂಗೀತ ಕ್ಷೇತ್ರದ ಗಣ್ಯರು ಇಲ್ಲಿಗೆ ಬರುತ್ತಲೇ ಇರುತ್ತಾರೆ.
Laxmi News 24×7