ಬೆಳಗಾವಿ : ಕೃಷಿ ಭೂಮಿ ಮಣ್ಣಿನ ಆರೋಗ್ಯ ಕಾಪಾಡಲು, ಕೃಷಿಯನ್ನು ಲಾಭದಾಯಕವಾಗಿಸಲು ಸಮಗ್ರ ಪೋಷಕಾಂಶಗಳ ನಿರ್ವಹಣೆ, ರಸಗೊಬ್ಬರಗಳ ಬಳಕೆ ನಿಯಂತ್ರಣಕ್ಕೆ ವಿನೂನ ಅಭಿಯಾನ ಆರಂಭಿಸಿದ ಕೇಂದ್ರ ಸರ್ಕಾರ!
ಹೌದು. ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ದೇಶನ ಮೆರೆಗೆ ಕೃಷಿ ಇಲಾಖೆಯ ಸಹಯೋಗದಲ್ಲಿ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಸಮತೋಲಿತ ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳ ಬಳಕೆ ಕುರಿತ ವಿಶೇಷ ಅಭಿಯಾನವು ಉತ್ತಮ ಸ್ಪಂದನೆ ಪಡೆದುಕೊಂಡಿದೆ. 2026 ಏಪ್ರೀಲ್ 22ರಿಂದ ಮೇ 31 ರವರೆಗೆ ನಡೆದ ಈ ಅಭಿಯಾನದಲ್ಲಿ ಸಾವಿರಾರು ರೈತರು ಭಾಗವಹಿಸಿ ಪರಿಸರ ಸ್ನೇಹಿ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರೈತರಿಗೆ ಮಣ್ಣಿನ ಪರೀಕ್ಷೆ ಆಧಾರಿತ ಗೊಬ್ಬರ ಬಳಕೆ, ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಜೈವಿಕ ಕೃಷಿಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ರೈತ-ವಿಜ್ಞಾನಿಗಳ ಸಂವಾದ, ತರಬೇತಿ ಶಿಬಿರಗಳು, ಕ್ಷೇತ್ರ ಪ್ರದರ್ಶನಗಳು ಮತ್ತು ಬೆಳೆಗಳ ನೇರ ವೀಕ್ಷಣಾ ಕಾರ್ಯಕ್ರಮಗಳು ರೈತರ ಗಮನ ಸೆಳೆದವು. ಒಟ್ಟು 38 ಜಾಗೃತಿ ಕಾರ್ಯಕ್ರಮಗಳಲ್ಲಿ 8,132 ರೈತರು, ಕೃಷಿಕ ಮಹಿಳೆಯರು ಹಾಗೂ ಗ್ರಾಮೀಣ ಯುವಕರು ಪಾಲ್ಗೊಂಡಿದ್ದು, ವೈಜ್ಞಾನಿಕ ಕೃಷಿ ಪದ್ಧತಿಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಈಗಾಗಲೇ ಅಭಿಯಾನದ ಪೂರಕವಾಗಿ ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 716 ಕೆ.ಜಿ. ಜೈವಿಕ ಉತ್ಪನ್ನಗಳನ್ನು ರೈತರಿಗೆ ವಿತರಿಸಲಾಗಿದೆ. ಇದರಲ್ಲಿ 398 ಕೆ.ಜಿ. ಜೈವಿಕ ಗೊಬ್ಬರ, 220 ಕೆ.ಜಿ. ಜೈವಿಕ ಕೀಟನಾಶಕ ಹಾಗೂ 98 ಕೆ.ಜಿ. ಜೈವಿಕ ಶಿಲೀಂಧ್ರನಾಶಕಗಳು ಸೇರಿವೆ.ಈ ಜೈವಿಕ ಉತ್ಪನ್ನಗಳ ಬಳಕೆಯಿಂದ ಅಂದಾಜು 3.98 ಟನ್ ರಾಸಾಯನಿಕ ಗೊಬ್ಬರ, 1.10 ಟನ್ ಕೀಟನಾಶಕ ಹಾಗೂ 0.49 ಟನ್ ಶಿಲೀಂಧ್ರನಾಶಕಗಳ ಬಳಕೆ ತಪ್ಪಿದ್ದು, ಒಟ್ಟಾರೆ 5.57 ಟನ ರಾಸಾಯನಿಕಗಳ ಬಳಕೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ರೈತರಿಗೆ 11.81 ಲಕ್ಷ ರೂ. ಆರ್ಥಿಕ ಉಳಿತಾಯ ಸಾಧ್ಯವಾಗಿದೆ.
ಮಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಕೃಷಿ ವೆಚ್ಚ ತಗ್ಗಿಸಿ, ಉತ್ಪಾದಕತೆ ಹೆಚ್ಚಿಸಲು ಜೈವಿಕ ಮತ್ತು ಸಮತೋಲಿತ ಗೊಬ್ಬರ ಬಳಕೆ ಅತ್ಯಂತ ಅವಶ್ಯಕವಾಗಿದೆ. ಈ ಅಭಿಯಾನವು ರೈತರಲ್ಲಿ ಸುಸ್ಥಿರ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿ, ಪರಿಸರ ಸ್ನೇಹಿ ಕೃಷಿಯತ್ತ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ರಾಸಾಯನಿಕ ಗೊಬ್ಬರ ಬಳಕೆಗೆ ಸಂಪೂರ್ಣ ನಿಯಂತ್ರಿಸಲು ಪ್ರಥಮ ಹಂತದಲ್ಲಿಯೇ ರೈತರಿಂದ ಉತ್ತಪ ಸ್ಫಂದನೆ ದೊರೆತಿದೆ.ಅಲ್ಲದೆ, ಪ್ರಸಕ್ತ ಮುಂಗಾರಿನಲ್ಲಿ ರಾಸಾಯನಿಕ ಗೊಬ್ಬರ ರಹಿತ ಕೃಷಿಚಟುಟಿಕೆ ಕೈಗೊಳ್ಳಲು ರೈತರು ಸಂಕಲ್ಪ ಮಾಡಿದ್ದಾರೆ ಎಂದು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
Laxmi News 24×7