Breaking News

ಟಿಸಿಎಸ್ ಬಳಿಕ ವಿಪ್ರೋದಲ್ಲಿ ಭುಗಿಲೆದ್ದ ಕಾರ್ಪೋರೆಟ್ ಜಿಹಾದ್ – ಕಂಪನಿ ವಿರುದ್ದ ಮಾಜಿ ಉದ್ಯೋಗಿ ಗಂಭೀರ ಆರೋಪ

Spread the love

ಪುಣೆ: ದೇಶದ ಮುಂಚೂಣಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲೊಂದಾದ ವಿಪ್ರೋ ಟೆಕ್ನಾಲಜೀಸ್ ವಿರುದ್ಧ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಧರ್ಮದ ಆಧಾರದ ಮೇಲೆ ತಮಗೆ ಮಾನಸಿಕ ಕಿರುಕುಳ ನೀಡಲಾಗಿದೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಲಾಗಿದೆ ಹಾಗೂ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿ ಅವರು ಸಂಸ್ಥೆಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಟಿಸಿಎಸ್ (TCS) ಕಂಪನಿಯ ನಾಸಿಕ್ ಶಾಖೆಯಲ್ಲಿ ಉದ್ಯೋಗಿಗಳಿಗೆ ಕಿರುಕುಳ ನೀಡಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಆ ಬೆನ್ನಲ್ಲೇ ಈಗ ಪುಣೆಯ ಹಿಂಜಾವಾಡಿ ಕ್ಯಾಂಪಸ್‌ನಲ್ಲಿರುವ ವಿಪ್ರೋ ಸಂಸ್ಥೆಯಲ್ಲೂ ಇಂತಹುದೇ ಪ್ರಕರಣ ಬೆಳಕಿಗೆ ಬಂದಿರುವುದು ಐಟಿ ವಲಯದಲ್ಲಿ ತಲ್ಲಣ ಮೂಡಿಸಿದೆ.

ಪುಣೆಯಲ್ಲಿ ‘ಹಿಂದೂ ಜನಜಾಗೃತಿ ಸಮಿತಿ’ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಮಾಜಿ ಮಹಿಳಾ ಉದ್ಯೋಗಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ವಿಪ್ರೋ ಸಂಸ್ಥೆಯ ಹಿಂಜಾವಾಡಿ ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಸಹೋದ್ಯೋಗಿಯೊಬ್ಬರು ನನ್ನ ಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಅಷ್ಟೇ ಅಲ್ಲದೆ, ಮುಸ್ಲಿಂ ವ್ಯಕ್ತಿಯೊಬ್ಬರ ಜೊತೆ ಸಂಬಂಧ ಬೆಳೆಸುವಂತೆಯೂ ಬಲವಂತ ಮಾಡುತ್ತಿದ್ದರು. ಒಂದು ವೇಳೆ ಧರ್ಮ ಬದಲಾಯಿಸಿದರೆ ಅತ್ಯುತ್ತಮ ಜೀವನ ಸಿಗುತ್ತದೆ ಹಾಗೂ ವಿದೇಶದಲ್ಲಿ ಉದ್ಯೋಗದ ದೊಡ್ಡ ಅವಕಾಶಗಳು ಲಭ್ಯವಾಗುತ್ತವೆ ಎಂದು ಆಮಿಷ ಒಡ್ಡುತ್ತಿದ್ದರು ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಸೂಕ್ಷ್ಮ ವಿಚಾರವನ್ನು ನಾನು ಕಂಪನಿಯ ಹಿರಿಯ ಅಧಿಕಾರಿಗಳು ಹಾಗೂ ಮಾನವ ಸಂಪನ್ಮೂಲ  ವಿಭಾಗದ ಗಮನಕ್ಕೆ ತಂದಿದ್ದೆ. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, ದೂರು ನೀಡಿದ ನನ್ನ ವಿರುದ್ಧವೇ ಪ್ರತಿದೂರು ದಾಖಲಾಗುವಂತೆ ಮಾಡಲಾಯಿತು. ಕಂಪನಿಯ ಆಂತರಿಕ ತನಿಖಾ ಸಮಿತಿಯು  ವಿಚಾರಣೆಯ ವೇಳೆ ಸಂಪೂರ್ಣ ಪಕ್ಷಪಾತದ ಧೋರಣೆ ತಳೆಯಿತು. ನನ್ನ ಬಳಿ ಸೂಕ್ತ ಪುರಾವೆಗಳಿದ್ದರೂ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಅಂತಿಮವಾಗಿ 2025ರ ಆಗಸ್ಟ್‌ನಲ್ಲಿ ಸಭೆಯೊಂದಕ್ಕೆ ಕರೆದು, ನನ್ನಿಂದ ಬಲವಂತವಾಗಿ ರಾಜೀನಾಮೆ ಪಡೆದು ಕಂಪನಿಯಿಂದ ಹೊರಹಾಕಲಾಯಿತು” ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತೆಯ ಪರ ವಕೀಲ ವಿವೇಕ್ ಭೋಸ್ಲೆ ಮಾತನಾಡಿ, ತೀವ್ರ ಮಾನಸಿಕ ಒತ್ತಡ ಹೇರಿ ಉದ್ಯೋಗಿಯಿಂದ ರಾಜೀನಾಮೆ ಪಡೆದಿರುವುದು ಕಾರ್ಮಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಪ್ರೋ ಸಂಸ್ಥೆಗೆ ಕಾನೂನು ನೋಟಿಸ್ ನೀಡಲಾಗಿದೆ. ಮಹಿಳಾ ಉದ್ಯೋಗಿಯ ರಾಜೀನಾಮೆಯನ್ನು ತಕ್ಷಣ ರದ್ದುಗೊಳಿಸಿ, ಗೌರವಯುತವಾಗಿ ಮರುನೇಮಕ ಮಾಡಿಕೊಳ್ಳಬೇಕು. ಮಾನಸಿಕ ಹಿಂಸೆ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿದ ಕಾರಣಕ್ಕಾಗಿ 50 ಲಕ್ಷ ರೂ. ಪರಿಹಾರ ನೀಡಬೇಕು. ಸಂಸ್ಥೆಯು ಅಧಿಕೃತವಾಗಿ ಕ್ಷಮೆಯಾಚಿಸಬೇಕು ಮತ್ತು ಕಿರುಕುಳಕ್ಕೆ ಕಾರಣರಾದವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು.ಮುಂದಿನ 15 ದಿನಗಳ ಒಳಗಾಗಿ ವಿಪ್ರೋ ಸಂಸ್ಥೆಯಿಂದ ಸೂಕ್ತ ಪ್ರತಿಕ್ರಿಯೆ ಬಾರದಿದ್ದರೆ, ನಾವು ಸಿವಿಲ್, ಕ್ರಿಮಿನಲ್ ಹಾಗೂ ಕಾರ್ಮಿಕ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.

ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕೆಂದು ‘ಹಿಂದೂ ಜನಜಾಗೃತಿ ಸಮಿತಿ’ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಗಂಭೀರ ಆರೋಪಗಳ ಕುರಿತು ವಿಪ್ರೋ ಸಂಸ್ಥೆಯಿಂದ ಇನ್ನು ಯಾವುದೇ ಅಧಿಕೃತ ಸ್ಪಷ್ಟನೆ ಅಥವಾ ಪ್ರತಿಕ್ರಿಯೆ ಹೊರಬಂದಿಲ್ಲ.

ಮತ್ತೊಂದೆಡೆ, ಈ ಘಟನೆಯನ್ನು ಖಂಡಿಸಿರುವ ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ಅಮರ್ ಶಂಕರ್ ಸಬಳೆ, “ನಮ್ಮ ಹಿಂದೂ ಸಹೋದರಿಗೆ ಮತಾಂತರದ ಕಿರುಕುಳ ನಡೆದಿರುವ ಬಗ್ಗೆ ವಿಪ್ರೋ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಅದನ್ನು ನಿರ್ಲಕ್ಷಿಸಿರುವುದು ಖಂಡನೀಯ. ಭಾರತದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಹಕ್ಕಿದೆ, ಆದರೆ ಹಿಂದೂ ಸಂಸ್ಕೃತಿಗೆ ಧಕ್ಕೆ ತರುವ ಇಂತಹ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾರಿಗೆ ತಂದಿರುವ ಕಠಿಣ ‘ಬುಲ್ಡೋಜರ್ ಸಂಸ್ಕೃತಿ’ಯಂತಹ ನಿಯಮಗಳು ಇಂತಹ ಪ್ರಕರಣಗಳನ್ನು ಹತ್ತಿಕ್ಕಲು ಮಹಾರಾಷ್ಟ್ರದಲ್ಲೂ ಜಾರಿಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಭಾರೀ ಮಳೆಗೆ ನೆಲಕ್ಕೆ ಬಿದ್ದ ವಿದ್ಯುತ್‌ ತಂತಿಯಿಂದ ಶಾಕ್‌ – 8 ವರ್ಷದ ಬಾಲಕ ಸಾವು

Spread the loveಬೀದರ್: ಧಾರಾಕಾರ ಮಳೆಗೆ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೀದರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ