Breaking News

ಭವಿಷ್ಯದ ತಂತ್ರಜ್ಞಾನ ಕಲಿಕೆಗೆ ಹೊಸ ದಾರಿ; ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶ ಎಂದ ಡಿಸಿ ಮೊಹಮ್ಮದ್ ರೋಶನ್

Spread the love

ಬೆಳಗಾವಿ : ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ನಗರದ ಉದ್ಯಮಬಾಗದಲ್ಲಿರುವ ಜೈನ್ ಹೆರಿಟೇಜ್ ಸ್ಕೂಲ್‌ನಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ  ಆಧಾರಿತ ಇನೋವೇಶನ್ ಮತ್ತು ಸ್ಕಿಲ್ ಲ್ಯಾಬ್ ಅನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು ಸೋಮವಾರ ಉದ್ಘಾಟಿಸಿದರು.

ಶಾಲೆಯ ಆರಂಭೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳು, ನೂತನ ಲ್ಯಾಬ್‌ನ ವಿವಿಧ ವಿಭಾಗಗಳನ್ನು ವೀಕ್ಷಿಸಿ ಅದರಲ್ಲಿರುವ ತಂತ್ರಜ್ಞಾನ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಮತ್ತು ನವೋದ್ಯಮ ಚಿಂತನೆ ಬೆಳೆಸಲು ಈ ಲ್ಯಾಬ್ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್, ಇಂದಿನ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ, ರೊಬೋಟಿಕ್ಸ್, ಮೆಷಿನ್ ಲರ್ನಿಂಗ್ ಹಾಗೂ ಡಿಜಿಟಲ್ ತಂತ್ರಜ್ಞಾನಗಳು ಪ್ರತಿಯೊಂದು ಕ್ಷೇತ್ರದಲ್ಲೂ ಅನಿವಾರ್ಯವಾಗಿವೆ. ಇಂತಹ ತಂತ್ರಜ್ಞಾನಗಳ ಅರಿವು ಮತ್ತು ಪ್ರಾಯೋಗಿಕ ಅನುಭವ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ದೊರೆತರೆ ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಾರೆ ಎಂದು ಹೇಳಿದರು.

“ಮುಂದಿನ ದಿನಗಳಲ್ಲಿ ಉದ್ಯೋಗ, ಕೈಗಾರಿಕೆ, ಆರೋಗ್ಯ, ಕೃಷಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಎಐ ಪ್ರಮುಖ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳು ಈ ತಂತ್ರಜ್ಞಾನವನ್ನು ಕೇವಲ ಬಳಸುವವರಾಗಿರದೆ, ಹೊಸ ಆವಿಷ್ಕಾರಗಳನ್ನು ಮಾಡುವವರಾಗಬೇಕು. ಅದಕ್ಕಾಗಿ ಇಂತಹ ಅತ್ಯಾಧುನಿಕ ಲ್ಯಾಬ್‌ಗಳ ಅಗತ್ಯವಿದೆ. ಜೈನ್ ಹೆರಿಟೇಜ್ ಸ್ಕೂಲ್ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಇಟ್ಟಿದ್ದು, ಬೆಳಗಾವಿಯ ಮಕ್ಕಳಿಗೆ ಭವಿಷ್ಯದ ತಂತ್ರಜ್ಞಾನ ಜಗತ್ತಿನ ಬಾಗಿಲನ್ನು ತೆರೆದಿದೆ,” ಎಂದು ಹೇಳಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಕ್ಲಸ್ಟರ್ ಮ್ಯಾನೇಜರ್ ವೆಂಕಟೇಶ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ತಾಂತ್ರಿಕ ಜ್ಞಾನವನ್ನು ಬೆಳೆಸುವಲ್ಲಿ ಇಂತಹ ಲ್ಯಾಬ್‌ಗಳು ಅತ್ಯಂತ ಪರಿಣಾಮಕಾರಿ ಎಂದು ಹೇಳಿದರು.

“ಎಐ, ರೊಬೋಟಿಕ್ಸ್ ಮತ್ತು ನವೋದ್ಯಮ ಆಧಾರಿತ ಶಿಕ್ಷಣವು ಇಂದಿನ ಅವಶ್ಯಕತೆಯಾಗಿದೆ. ಜೈನ್ ಹೆರಿಟೇಜ್ ಸ್ಕೂಲ್ ಸ್ಥಾಪಿಸಿರುವ ಈ ಲ್ಯಾಬ್ ಮಕ್ಕಳಿಗೆ ಹೊಸ ಜಗತ್ತನ್ನು ಪರಿಚಯಿಸಲಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಮತ್ತು ಜಾಗತಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಇದು ನೆರವಾಗಲಿದೆ,” ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯೆ ಡಾ. ಮಾಧುರಿ ದೀಕ್ಷಿತ, ಜೈನ್ ಗ್ರೂಪ್ ನಿರ್ದೇಶಕಿ ಶ್ರದ್ಧಾ ಕಟವಟೆ, ಮುಖ್ಯ ಆಡಳಿತಾಧಿಕಾರಿ ಆ್ಯಮಿ ದೋಶಿ, ಪ್ರಾಚಾರ್ಯೆ ರೋಹಿಣಿ ಕೆ.ಬಿ., ಆಲ್ಫೇಶ್ ಜೈನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ರೋಬೋಟ್‌ಗಳಿಂದ ಅತಿಥಿಗಳಿಗೆ ಸ್ವಾಗತ

ಶಾಲೆಯ ಆರಂಭೋತ್ಸವದ ಹಿನ್ನೆಲೆಯಲ್ಲಿ ಸಂಪೂರ್ಣ ಆವರಣವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರೋಬೋಟ್‌ಗಳು ಅತಿಥಿಗಳು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದವು. ರೋಬೋಟ್‌ಗಳೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಲ್ಯಾಬ್‌ನಲ್ಲಿ ಎಐ ಆಧಾರಿತ ಕಲಿಕಾ ಮಾದರಿಗಳು, ರೊಬೋಟಿಕ್ಸ್ ಕಿಟ್‌ಗಳು, ಕೋಡಿಂಗ್ ಮತ್ತು ಆಟೊಮೇಷನ್ ವ್ಯವಸ್ಥೆಗಳು ಸೇರಿದಂತೆ ವಿವಿಧ ತಾಂತ್ರಿಕ ಸಾಧನಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಜೈನ್ ಹೆರಿಟೇಜ್ ಸ್ಕೂಲ್‌ನ ಈ ಪ್ರಯತ್ನವು ಬೆಳಗಾವಿಯ ವಿದ್ಯಾರ್ಥಿಗಳಿಗೆ ಭವಿಷ್ಯದ ಕೌಶಲ್ಯಗಳನ್ನು ಕಲಿಯಲು ಮತ್ತು ನವೋದ್ಯಮ ಚಿಂತನೆ ಬೆಳೆಸಲು ಮಹತ್ವದ ವೇದಿಕೆಯಾಗಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟರು.


Spread the love

About Laxminews 24x7

Check Also

ಕನಿಷ್ಠ ವೇತನ ಹೆಚ್ಚುವರಿ ಆದೇಶ ವಾಪಸ್ಸು ಪಡೆಯಲು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

Spread the loveಬೆಳಗಾವಿ : ರಾಜ್ಯ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ತಿದ್ದುಪಡಿ ಆದೇಶವನ್ನು ವಿರೋಧಿಸಿ ನಗರದಲ್ಲಿ  ವಿವಿಧ ವ್ಯಾಪಾರ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ