ಬೆಳಗಾವಿ : ಗೋವಾ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಬಕ್ರೀದ್ ಸಂದರ್ಭದಲ್ಲಿ ಅಕ್ರಮವಾಗಿ ಗೋ ಸಾಗಾಟ ನಡೆಯಲಿದ್ದು, ಇದನ್ನು ತಡೆಯಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ಆರಂಭಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಎಚ್‌ಪಿ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜರುಗಿದ ರ‌್ಯಾಲಿಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಹಾಗೂ ಕೆಲ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ಮತ್ತು ಗೋ ಹತ್ಯೆ ಎಗ್ಗಿಲ್ಲದೇ ನಡೆಯುತ್ತಿದೆ. ವಿಧೇಯಕದ ನಿಯಮಗಳನ್ನು ಗಾಳಿಗೆ ತೂರಿ ಗೋ ಹತ್ಯೆ ನಡೆಸುತ್ತಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಗೋವನ್ನು 33 ಕೋಟಿ ದೇವಾನು ದೇವತೆಗಳ ವಾಸಸ್ಥಾನವೆಂದು ಪೂಜಿಸಿ, ಆರಾಧಿಸುವ ಸಂಸ್ಕೃತಿ ನಮ್ಮದು. ಗೋ ಹತ್ಯೆಯಿಂದ ಹಿಂದೂಗಳ ಭಾವನೆಗೆ ಹಾಗೂ ಅಸ್ಮಿತೆಗೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯೂ ಪೊಲೀಸ್, ಸಾರಿಗೆ ಸೇರಿದಂತೆ ಸಂಬಂಧಿತ ಇಲಾಖೆಯವರಿಗೆ ಸರ್ಕಾರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಬೇಕು. ಆದೇಶ ಉಲ್ಲಂಘಿಸುವ ಗೋ ಹಂತಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂಗಳ ಅಸ್ಮಿತೆಯ ಸಂಕೇತವಾದ ಗೋ ಮಾತೆಯ ರಕ್ಷೆಗೆ ತಾವು ಪ್ರಮುಖ ಕೇಂದ್ರಗಳಲ್ಲಿ ಪರಿಶೀಲನಾ ತಂಡವನ್ನು ನೇಮಿಸಿ, ಚೆಕ್ ಪೋಸ್ಟ್ ತೆರೆದು ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.
ಶಿವಾಪುರದ ಮುಪ್ಪಿನಕಾಡು ಸಿದ್ಧೇಶ್ವರ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಪರಮೇಶ್ವರ ಸ್ವಾಮೀಜಿ, ಕೃಷ್ಣ ಭಟ್, ಮಹಾಂತೇಶ ಕರಲಿಂಗಣ್ಣವರ ಇತರರಿದ್ದರು.
Laxmi News 24×7