ಅಮರಾವತಿ: ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ. 3ನೇ ಮಗು ಹುಟ್ಟಿದ್ರೆ 30,000 ರೂ. ಮತ್ತು 4ನೇ ಮಗು ಹುಟ್ಟಿದ್ರೆ 40,000 ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವರ್ಣ ಆಂಧ್ರ, ಸ್ವಚ್ಛ ಆಂಧ್ರ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3ನೇ ಮತ್ತು 4ನೇ ಮಗು ಹುಟ್ಟಿದ್ರೆ ಆರ್ಥಿಕ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದರು.
ಜನನ ಪ್ರಮಾಣ ಹೆಚ್ಚಿಸಲು ಸಮಾಜ ಒಟ್ಟಾಗಿ ಕೆಲಸ ಮಾಡುವ ಸಮಯ ಈಗ ಬಂದಿದೆ. ಈ ಕುರಿತು ಸರ್ಕಾರ ಅಧಿಕೃತ ತೀರ್ಮಾನ ಕೈಗೊಂಡಿದ್ದು, ಮುಂದಿನ 1 ತಿಂಗಳೊಳಗೆ ಸಂಪೂರ್ಣ ಮಾರ್ಗಸೂಚಿ ಮತ್ತು ವಿವರಗಳನ್ನ ಪ್ರಕಟಿಸಲಿದೆ ಎಂದು ತಿಳಿಸಿದರು.
ಕೆಲ ದಿನಗಳ ಹಿಂದೆ ಸಿಎಂ ನಾಯ್ಡು ಅವರು, 2ನೇ ಮಗು ಹುಟ್ಟಿದ್ರೆ 25,000 ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಘೋಷಿಸಿದ್ದರು. ಮಾರ್ಚ್ 5 ರಂದು ಈ ಯೋಜನೆಯನ್ನ ಅನುಷ್ಠಾನಗೊಳಿಸಿದ್ದರು. ಆದ್ರೆ ಜನನ ಪ್ರಮಾಣದಲ್ಲಿ ಕುಸಿತ ಕಂಡುಬಂದ ಹಿನ್ನೆಲೆ 3 ಮತ್ತು 4ನೇ ಮಗು ಹೊಂದಿದ ಕುಟುಂಬಗಳಿಗೆ ಪ್ರೋತ್ಸಾಹ ಧನ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.
ಇತ್ತೀಚಿನ ದಿನಗಳಲ್ಲಿ, ಕೆಲ ದಂಪತಿಗಳು ಕುಟುಂಬದ ಆದಾಯ ಕಡಿಮೆ ಮಾಡಲು ಒಂದು ಮಗು ಹೊಂದಲು ಬಯಸುತ್ತಿದ್ದಾರೆ. ಮೊದಲು ಮಗು ಗಂಡು ಮಗುವಾಗಿದ್ದರೆ, 2ನೇ ಮಗು ಹೊಂದುವ ಪ್ರಮೇಯಕ್ಕೆ ಹೋಗುತ್ತಿಲ್ಲ. ಅಲ್ಲದೇ ಕೆಲ ಹೆಣ್ಣುಮಕ್ಕಳು ನಿಗದಿತ ವಯಸ್ಸಿಂತ ತಡವಾಗಿ ಮದುವೆ ಆಗುತ್ತಿದ್ದು, ಆರೋಗ್ಯ ಸಮಸ್ಯೆಗಳು ಕೂಡ ಮಕ್ಕಳನ್ನ ಜನನಕ್ಕೆ ತೊಡಗು ತರುತ್ತಿವೆ.
Laxmi News 24×7