Breaking News

ಲೋಕಸಭೆಯಲ್ಲಿ ನಾವು ಕಾಂಗ್ರೆಸ್‌ ಜೊತೆ ಕೂರಲ್ಲ, ಪ್ರತ್ಯೇಕ ಆಸನ ನೀಡಿ: ಸ್ಪೀಕರ್‌ಗೆ ಡಿಎಂಕೆ ಮನವಿ

Spread the love

ನವದೆಹಲಿ: ತಮಿಳುನಾಡು ರಾಜಕಾರಣದ ದಿಢೀರ್ ಬೆಳವಣಿಗೆಯಿಂದಾಗಿ ದಶಕಗಳ ಕಾಲದ ಕಾಂಗ್ರೆಸ್‌-ಡಿಎಂಕೆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ನೇರ ಪರಿಣಾಮ ಈಗ ಸಂಸತ್ತಿನವರೆಗೂ ತಲುಪಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳಲು ಡಿಎಂಕೆ ನಿರಾಕರಿಸಿದೆ.

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಬದಲಾದ ರಾಜಕೀಯ ಸಮೀಕರಣಗಳ ಹಿನ್ನೆಲೆಯಲ್ಲಿ, ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಪಕ್ಷದ ಹಿರಿಯ ನಾಯಕಿ ಕನಿಮೊಳಿ(Kanimozhi) ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡಿನಲ್ಲಿ ನಟ ವಿಜಯ್  ಅವರ ತಮಿಳಗ ವೆಟ್ರಿ ಕಳಗಂ  ಪಕ್ಷಕ್ಕೆ ಕಾಂಗ್ರೆಸ್‌ ಬೆಂಬಲ ನೀಡುತ್ತಿರುವುದು ಡಿಎಂಕೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಿತ್ರ ಪಕ್ಷವಾಗಿದ್ದುಕೊಂಡೇ ಎದುರಾಳಿ ಬಣಕ್ಕೆ ಬೆಂಬಲ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.

ಈ ವರ್ಷದ ಆರಂಭದಲ್ಲಿ ಸೀಟು ಹಂಚಿಕೆ ಕುರಿತು ನಡೆದ ಮಾತುಕತೆಯಲ್ಲಿ ಕಾಂಗ್ರೆಸ್ 40 ಸೀಟುಗಳಿಗಾಗಿ ಪಟ್ಟು ಹಿಡಿದಿತ್ತು. ಆದರೆ ಡಿಎಂಕೆ ಕೇವಲ 25-30 ಸೀಟುಗಳನ್ನು ನೀಡಲು ಮಾತ್ರ ಒಪ್ಪಿತ್ತು. ಇದು ಉಭಯ ಪಕ್ಷಗಳ ನಡುವೆ ಅಸಮಾಧಾನದ ಕಿಡಿ ಹಚ್ಚಿತ್ತು.

ಮಿಳುನಾಡು ವಿಧಾನಸಭೆಯಲ್ಲಿ ಕೇವಲ 5 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ಸೀಟು ಹಂಚಿಕೆ ವಿಚಾರದಲ್ಲಿ ಹಠ ಹಿಡಿದದ್ದು ಮತ್ತು ನಂತರ ಟಿವಿಕೆ ಪರ ನಿಂತದ್ದು ಮೈತ್ರಿ ಮುರಿದುಬೀಳಲು ಪ್ರಮುಖ ಕಾರಣವಾಯಿತು.

ಕನಿಮೊಳಿ ಅವರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಕಟುವಾದ ಶಬ್ದಗಳನ್ನೇ ಬಳಸಿದ್ದಾರೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಮ್ಮ ವಿರೋಧಿ ಬಣವನ್ನು ಬೆಂಬಲಿಸುತ್ತಿರುವುದರಿಂದ, ಲೋಕಸಭೆಯಲ್ಲಿ ಆ ಪಕ್ಷದ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳುವುದು ಇನ್ನು ಮುಂದೆ ನಮಗೆ ಸೂಕ್ತವಲ್ಲ. ಹಾಗಾಗಿ ಡಿಎಂಕೆ ಸಂಸದರಿಗೆ ಪ್ರತ್ಯೇಕ ಆಸನ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಬೆಳವಣಿಗೆಯು ರಾಷ್ಟ್ರೀಯ ಮಟ್ಟದಲ್ಲಿ ‘ಇಂಡಿಯಾ’ (INDIA) ಒಕ್ಕೂಟದ ಬಲಕ್ಕೆ ಹೊಡೆತ ನೀಡುವ ಸಾಧ್ಯತೆಯಿದೆ. ತಮಿಳುನಾಡು ರಾಜಕೀಯದ ಈ ‘ಸೀಟು ಸಮರ’ ದೆಹಲಿಯ ಸಂಸತ್ ಭವನದ ಒಳಗೆ ಈಗ ಹೊಸ ಆಸನ ವ್ಯವಸ್ಥೆಗೆ ನಾಂದಿ ಹಾಡಿದೆ.


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ