ಬೆಳಗಾವಿ: ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂಗೊಳಿಸಲು ಸರ್ಕಾರ ಕ್ರಮ ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ ಅಶೋಕ ಸಾಲಪ್ಪ ಹೇಳಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಮತ್ತು ಆರೋಗ್ಯ ವಿಮಾ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಪೌರಕಾರ್ಮಿಕರಿಗೆ ಭರವಸೆ ನೀಡಿರುವಂತೆ ಈಗಾಗಲೇ 20,000 ಕಾರ್ಮಿಕರನ್ನು ಕಾಯಂಗೊಳಿಸಿದೆ ಎಂದರು.
ಪೌರಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ 5 ಲಕ್ಷ ರೂ.ವರೆಗೆ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯವನ್ನು ಸರ್ಕಾರ ಪೌರ ಕಾರ್ಮಿಕರಿಗೆ ನೀಡುತ್ತಿದೆ. ನಿವೃತ್ತಿಯವರೆಗೂ ಕಾರ್ಡ್ ಬಳಸಿ ಆರೋಗ್ಯ ಚಿಕಿತ್ಸೆ ಪಡೆಯಬಹುದು.
ಸಾಲಪ್ಪ ವರದಿಯಂತೆ 56 ಅಂಶಗಳಲ್ಲಿ 34 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದು, ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಸದಾ ಬಧ್ಧವಾಗಿದೆ ಎಂದು ಹೇಳಿದರು. ಮೇಯರ್ ಪ್ರೀತಿ ಕಾಮಕರ ಮಾತನಾಡಿ, ನಗರದ ಜನತೆಯ ಆರೋಗ್ಯ ಕಾಪಾಡುವ ಕಾರ್ಮಿಕರ ಆರೋಗ್ಯ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರದ ವಿಮಾ ಯೋಜನೆ ಜತೆಗೆ ಪಾಲಿಕೆಯಿಂದಲೂ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದರು.
ಉಪ ಮಹಾಪೌರ ಹನುಮಂತ ಕೊಂಗಾಲಿ ಮಾತನಾಡಿ, ಪಾಲಿಕೆಯಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದಿಂದ ನಿಯಮಿತವಾಗಿ ಅನುದಾನ ಬರಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು.
ಗುತ್ತಿಗೆದಾರರಿಂದ ಪೌರಕಾರ್ಮಿಕರಿಗೆ ಕಳಪೆ ಉಪಹಾರ ನೀಡಲಾಗುತ್ತಿದೆ ಎಂಬ ಆರೋಪಗಳಿದ್ದು, ಅದರ ಬದಲಾಗಿ ಉಪಾಹಾರಕ್ಕಾಗಿ ಕಾರ್ಮಿಕರ ಖಾತೆಗಳಿಗೆ ಹಣ ಜಮೆ ಮಾಡುವುದು ಸೂಕ್ತವೆಂದು ಹೇಳಿದರು. ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ವಿಮಾ ಕಂಪನಿಯ ಸಂಯೋಜಕ ಟಿ.ಎಲ್.ಕೃಷ್ಣಮೂರ್ತಿ, ನಿಗಮದ ಎಂಡಿ ಟಿ.ಕುಮಾರ, ನಗರಸೇವಕ ಬಾಬಾಜಾನ್ ಮುತವಾಲೆ, ನಿಗಮದ ಪದಾಧಿಕಾರಿಗಳಾದ ರಾಜು ಸಾಖೆ, ಎ.ಎ.ಯರಝರವಿ, ಅಭಿಯಂತರ ಹನುಮಂತ ಕಲಾದಗಿ ಇತರರಿದ್ದರು.
Laxmi News 24×7