Breaking News

ಬಡವರ ‘ಅನ್ನ’ಕ್ಕೆ ಕನ್ನ – ಗದಗದಲ್ಲಿ ಬೃಹತ್ ಪಡಿತರ ಅಕ್ಕಿ ದಂಧೆ ಪತ್ತೆ, 14 ಲಕ್ಷ ಮೌಲ್ಯದ ಅಕ್ಕಿ ಜಪ್ತಿ!

Spread the love

ಗದಗ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನ ಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದ ಜಾಲವನ್ನು ಗದಗ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.

ಗದಗ ನಗರದ ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜ್ ಬಳಿ ಸಂಚರಿಸುತ್ತಿದ್ದ ಮಧ್ಯಪ್ರದೇಶ ನೋಂದಣಿಯ ಲಾರಿಯನ್ನು ತಡೆದ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮ ಬಯಲಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಿಂದ ಹೊರಟಿದ್ದ ಈ ಲಾರಿ ಗದಗ, ಇಳಕಲ್ ಮಾರ್ಗವಾಗಿ ಗುಜರಾತ್‌ಗೆಕ್ಕಿಯನ್ನು ಸಾಗಿಸುತ್ತಿತ್ತು. ಅಂದಾಜು 14 ಲಕ್ಷ ರೂ ಮೌಲ್ಯದ 34,720 ಕೆಜಿ (347 ಕ್ವಿಂಟಾಲ್) ಅಕ್ಕಿ, 29 ಲಕ್ಷ ರೂಪಾಯಿ ಮೌಲ್ಯದ ಬೃಹತ್ ಲಾರಿ ಸೇರಿದಂತೆ ಸುಮಾರು 43 ಲಕ್ಷ ರೂಪಾಯಿ ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ತೆಯಾದ ಅಕ್ಕಿಯನ್ನು ಪಡಿತರ ಅಕ್ಕಿಯಲ್ಲ ಎಂದು ಬಿಂಬಿಸಲು ಪಾಲಿಶ್ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಇದು ಪಡಿತರ ಅಕ್ಕಿಯಲ್ಲ ಎಂದು ತೋರಿಸಲು ನಕಲಿ ಬಿಲ್‌ಗಳನ್ನು  ಸೃಷ್ಟಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಧಿಕಾರಿಗಳು ಲಾರಿಯನ್ನು ಪರಿಶೀಲಿಸಿದಾಗ ಅಕ್ಕಿಯ ಬೃಹತ್ ಜಾಲ ನೋಡಿ ಒಂದು ಕ್ಷಣ ದಂಗಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಪ್ರತಿಕ್ರಿಯಿಸಿ, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ. ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಕಾಣದ ಕುಳಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಈ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಮಾಲೀಕನ ವಿರುದ್ಧ ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಪ್ತಿ ಮಾಡಿದ ಅಕ್ಕಿ ಮೂಟೆಗಳನ್ನು ಕೆಎಫ್‌ಸಿಎಸ್‌ಸಿ (KFCSC) ಗೋಡೌನ್‌ಗೆ ರವಾನಿಸಲಾಗಿದೆ. ಆಹಾರ ನಿರೀಕ್ಷಕ ಜಗದೀಶ್ ಅಮಾತಿ ಅವರು ಪ್ರಕರಣದ ಮುಂದಿನ ಕಾನೂನು ಕ್ರಮಗಳ ಉಸ್ತುವಾರಿ ವಹಿಸಿದ್ದಾರೆ.


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ