ಬೆಳಗಾವಿಯಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸರ್ಕಾರ ಬಿಡುಗಡೆ ಮಾಡಿದ್ದ 50 ಲಕ್ಷ ರೂಪಾಯಿ ಅನುದಾನ ದುರ್ಬಳಕೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ರಾಜ್ಯ ಸರ್ಕಾರದ ಸೂಚನೆಯಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ಅವರು ಇಂದು ವಿಚಾರಣೆ ಆರಂಭಿಸಿದ್ದು, ಕನ್ನಡ ಸಂಘಟನೆಗಳ ಪ್ರಮುಖರು ಹಲವು ಮಹತ್ವದ ದಾಖಲೆಗಳನ್ನು ಒದಗಿಸಿದ್ದಾರೆ.
70ನೇ ರಾಜ್ಯೋತ್ಸವದ ಪ್ರಯುಕ್ತ ಮಂಜೂರಾದ ಅನುದಾನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದೀರ್ಘ ವಿಚಾರಣೆ ನಡೆಯಿತು. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಆಯುಕ್ತರ ಎದುರು ಹಾಜರಾಗಿ, ಹಣ ದುರ್ಬಳಕೆಯಾದ ರೀತಿ ಮತ್ತು ಪಾರದರ್ಶಕತೆ ಇಲ್ಲದ ಖರ್ಚುಗಳ ಬಗ್ಗೆ ಸಮಗ್ರ ವಿವರಗಳನ್ನು ನೀಡಿದರು. ಸರ್ಕಾರದ ಹಣ ಸಮರ್ಪಕವಾಗಿ ಬಳಕೆಯಾಗದೆ ದುರುಪಯೋಗವಾಗಿರುವ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರವು ಪ್ರಾದೇಶಿಕ ಆಯುಕ್ತರಿಗೆ ಈ ಹಿಂದೆ ಆದೇಶಿಸಿತ್ತು.
ವಿಚಾರಣೆ ವೇಳೆ ಕಿತ್ತೂರು ಕರ್ನಾಟಕ ಸೇನೆಯ ಮಹಾದೇವ ತಳವಾರ, ಸರ್ವೋದಯ ಸಂಘದ ಶ್ರೀನಿವಾಸ ತಾಳುಕರ, ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ ಸೇರಿದಂತೆ ಗಡಿನಾಡು ಕನ್ನಡಿಗರ ಸೇನೆಯ ಬಲರಾಮ ಮಾಸೇನಾಟ್ಟಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಾಜ್ಯೋತ್ಸವದ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ಕನ್ನಡ ಹೋರಾಟಗಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು. ವಿಚಾರಣೆ ಪೂರ್ಣಗೊಂಡ ಬಳಿಕ ಆಯುಕ್ತರು ಸರ್ಕಾರಕ್ಕೆ ನೀಡಲಿರುವ ವರದಿಯು ಈಗ ತೀವ್ರ ಕುತೂಹಲ ಮೂಡಿಸಿದೆ.
Laxmi News 24×7