ಗೋಕಾಕ; ಜನ ಹಾಗೂ ಜಾನುವಾರುಗಳಿಗೆ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ಹರಿಸಲಾಗುತ್ತಿರುವ ನೀರನ್ನು ಇನ್ನೂ ಮೂರು ದಿನಗಳವರೆಗೆ ವಿಸ್ತರಣೆ ಮಾಡಿರುವುದಕ್ಕೆ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದ್ದು, ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈಗಾಗಲೇ 10 ದಿನಗಳತನಕ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ಹರಿಸಿದ್ದು, ಆದರೂ ಕೌಜಲಗಿ ಉಪ ವಿಭಾಗದ ಯಾದವಾಡ, ಕಾಮನಕಟ್ಟಿ, ಕೊಪದಟ್ಟಿ, ಗುಲಗಂಜಿಕೊಪ್ಪ ಗ್ರಾಮಗಳಿಗೆ ನೀರು ತಲುಪಿಲ್ಲವಾದ್ದರಿಂದ ಅಲ್ಲಿನ ಸಾರ್ವಜನಿಕರ ಕೋರಿಕೆಯಂತೆ ದಿನಾಂಕ ಏ.17 ರಿಂದ ದಿನಾಂಕ ಏ.20 ರವರೆಗೆ ಒಟ್ಟು 3 ದಿನಗಳತನಕ ನೀರನ್ನು ಹರಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.
ಇದರಿಂದ ಕೌಜಲಗಿ ಮತ್ತು ಯಾದವಾಡ ಗ್ರಾಮಗಳ ಸಾರ್ವಜನಿಕರು ಮತ್ತು ದನಕರುಗಳಿಗೆ ಕುಡಿಯುವ ನೀರಿನ ಸದ್ಭಳಕೆಯಾಗಲಿದೆ.
ಶುಕ್ರವಾರ ದಿ. 17 ರಿಂದ ದಿ. 20 ರವರೆಗೆ ಮುಂದಿನ 3 ದಿನಗಳ ತನಕ ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ನೀರನ್ನು ವಿಸ್ತರಿಸಿ, ಹರಿಸಲು ಸಚಿವ ಸತೀಶ್ ಜಾರಕಿಹೊಳಿಯವರು ಕ್ರಮ ಕೈಗೊಂಡಿದ್ದು, ಸಮಸ್ತ ಸಾರ್ವಜನಿಕರು ಮತ್ತು ರೈತರ ಪರವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಶುಕ್ರವಾರದಿಂದ ಸೋಮವಾರತನಕ ದಿನಾಲು 2100 ಕ್ಯೂಸೆಕ್ಸ್ (0.544 ಟಿಎಂಸಿ) ನೀರನ್ನು ಹರಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದ್ದಾರೆ.
ಜನ ಹಾಗೂ ಜಾನುವಾರುಗಳಿಗೆ ಮಾತ್ರ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ಹೆಚ್ಚುವರಿಯಾಗಿ ವಿಸ್ತರಿಸಲಾಗಿದ್ದು, ನೀರನ್ನು ಯಾವುದೇ ಕಾರಣಕ್ಕೂ ಪೋಲು ಮಾಡದಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Laxmi News 24×7