ಧಾರವಾಡ: ‘ಆಲಿಕಲ್ಲು ಮಳೆಯಿಂದ ಕಲಘಟಗಿ, ಹುಬ್ಬಳ್ಳಿ, ನವಲಗುಂದ ತಾಲ್ಲೂಕಿನಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ವರದಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಎಲ್ಲ ತಾಲ್ಲೂಕುಮಟ್ಟದ ಅಧಿಕಾರಿಗಳ ಜೊತೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದರು.
‘ಕಲಘಟಗಿ ತಾಲ್ಲೂಕಿನ ಮಾಚಾಪುರ ಗ್ರಾಮ ಸುತ್ತಲು ಸುಮಾರು 5ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಜಾನುವಾರ ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಬೆಳೆ ಹಾನಿ ಹಾಗೂ ಮನೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ರೈತರು ಅಥವಾ ಫಲಾನುಭವಿಗಳಿಂದ ಯಾವುದೇ ದೂರು ಬರದಂತೆ ಸಮೀಕ್ಷೆ ಕೈಗೊಳ್ಳಬೇಕು’ ಎಂದು ನಿರ್ದೇಶಿಸಿದರು.
‘ಕಲಘಟಗಿಯಲ್ಲಿ ಅಂದಾಜು 205 ಎಕರೆ ಮಾವು ಸೇರಿದಂತೆ ಸುಮಾರು 450 ಎಕರೆ ಪ್ರದೇಶದಲ್ಲಿ ಮಾವು, ಬಾಳೆ, ತರಕಾರಿ ಬೆಳೆಗಳಿಗೆ ಹಾನಿ ಆಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಶೀಘ್ರ ಜಂಟಿ ಸಮೀಕ್ಷೆ ಮಾಡಿ, ನಿಖರವಾದ ವರದಿ ಸಲ್ಲಿಸಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿರುವ ರೈತರಿಗೆ ಪರಿಹಾರ ದೊರಕುವಂತೆ ಮಾಡಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ಸೂಚನೆ ನೀಡಬೇಕು’ ಎಂದರು.
‘ಅಕಾಲಿಕ ಮಳೆ ಅಥವಾ ಇತರ ತೊಂದರೆಗಳಿಗಾಗಿ ಸಾರ್ವಜನಿಕರು ತುರ್ತಾಗಿ ಸಂಪರ್ಕಿಸುವ ಸಾಧ್ಯತೆ ಇರುತ್ತದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟ ಹಾಗೂ ಎಲ್ಲ ಹಂತದ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿ, ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಂದ್ ಇಡಬಾರದು. ಕರೆ ಸ್ವೀಕರಿಸದಿದ್ದಲ್ಲಿ ಅಥವಾ ಸ್ವಿಚ್ ಆಫ್ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಉಪವಿಭಾಗಾಧಿಕಾರಿ ಶಾಲಾಂ ಹುಸೇನ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೆ.ಸಿ.ಭದ್ರಣ್ಣವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಎಸ್ ವಿ. ಸಂತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಜಗದೀಶ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ ಇದ್ದರು.
Laxmi News 24×7