Breaking News

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the love

ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದಾನೆ.

ಕೊಡಗು  ಜಿಲ್ಲೆಯ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದ್ದು, ಗುಡುಗು ಸಹಿತ ವರುಣ ಅಬ್ಬರಿಸಿದ್ದಾರೆ. ಇತ್ತ ದಿಢೀರ್ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

ಹಾಸನ  ಜಿಲ್ಲೆಯ ವಿವಿಧೆಡೆ ಧಾರಾಕಾರವಾಗಿ ಆಲಿಕಲ್ಲು ಮಳೆಯಾಗಿದೆ. ಆಲಿಕಲ್ಲು, ಬಿರುಗಾಳಿ, ಗುಡುಗು, ಮಿಂಚು, ಸಿಡಿಲು ಸಹಿತ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದ ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಪರದಾಡುವಂತಾಗಿದೆ. ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ. ಮೊದಲ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಚರಂಡಿಗಳು ಬ್ಲಾಕ್ ಆಗಿ ಮನೆಗೆ ನೀರು ನುಗ್ಗಿದೆ. ಸತತ ಒಂದು ಗಂಟೆ ಸುರಿದ ಮಳೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಅವಾಂತರ ಉಂಟಾಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿಯೂ  ಕೂಡ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಕಾದಿದ್ದ ಭೂಮಿಗೆ ತಂಪೆರೆದಿದ್ದಾನೆ. ಇನ್ನೂ ದಾವಣಗೆರೆಯಲ್ಲಿಯೂ  ಆಲಿಕಲ್ಲು ಮಳೆಯಾಗಿದ್ದು, ಹರಿಹರದಲ್ಲಿ ಗುಡುಗು, ಮಿಂಚು ಸಹಿತ ವರುಣ ಆರ್ಭಟಿಸಿದ್ದಾನೆ.

ಇನ್ನೂ ಕೊಪ್ಪಳದಲ್ಲಿ  ಮಳೆಯಿಂದಾಗಿ ಅನಾಹುತ ಉಂಟಾಗಿದೆ. ಸಿಡಿಲು ಬಡಿದು 15 ವರ್ಷದ ಬಾಲಕ ಮಂಜುನಾಥ್ ಸಾವನ್ನಪ್ಪಿದ್ದಾನೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ಕೊಪ್ಪಳದ ಯಲಬುರ್ಗಾದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಭಾರಿ ಮಳೆಯಾಗಿದೆ. ಎರಡು ಗಂಟೆ ಸತತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆಲಿಕಲ್ಲು ಮಳೆಯಿಂದಾಗಿ ಜಾನುವಾರುಗಳು ಪರದಾಡುವಂತಾಗಿದ್ದು, ಬಿಟ್ಟು ಬಿಡದೇ ಮಳೆಸುರಿದಿದೆ.

ಹಾವೇರಿ (Haveri) ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಾಗಿದೆ. ಅರ್ಧ ಗಂಟೆ ಕಾಲ ಬಿರುಗಾಳಿ ಸಮೇತ ಆಲಿಕಲ್ಲು ಮಳೆಗೆ ಜಮೀನಿನಲ್ಲಿರೋ ಜೋಳ ಮತ್ತು ಮೆಕ್ಕೆಜೋಳದ ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ.

ಗಡಿ ಜಿಲ್ಲೆ ಬೀದರ್‌ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗುಡುಗು, ಸಿಡಿಲು ಸಹಿತ ಮಳೆಗೆ ಜನ ಭಯಭೀತರಾಗಿದ್ದಾರೆ. ಬೀದರ್, ಹುಮ್ನಾಬಾದ್, ಬಸವಕಲ್ಯಾಣ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ