Breaking News

ಸಿಎಂ ಸಿದ್ದರಾಮಯ್ಯ 1.15 ಲಕ್ಷ ಕೋಟಿ ರೂ. ಸಾಲದ ಬಜೆಟ್‌ ಮಂಡಿಸಲಿದ್ದಾರೆ: ಜನರ ಮೇಲೆ ತೆರಿಗೆ ಖಚಿತ: ಆರ್.ಅಶೋಕ್ ವಾಗ್ದಾಳಿ

Spread the love

ಬೆಂಗಳೂರು: ಫೆ.6, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ 1.15 ಲಕ್ಷ ಕೋಟಿ ರೂ. ಸಾಲದ ಬಜೆಟ್‌ ಮಂಡಿಸಲಿದ್ದಾರೆ. ಜನರ ಮೇಲೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ ಎಂದರು.

ಚುನಾವಣೆಗೆ ಮುನ್ನ ಜನರ ಮೇಲೆ ಹೊರೆ ಹಾಕದೆ ಗ್ಯಾರಂಟಿ ತರುತ್ತೇವೆ ಎಂದು ಭರವಸೆ ನೀಡಿ, ಈಗ ತೆರಿಗೆಗಳ ಹೊರೆ ಹೇರಿದ್ದಾರೆ. ಸಿದ್ದರಾಮಯ್ಯ ಅವಧಿ ಮುಗಿಯುವ ವೇಳೆಗೆ ಒಟ್ಟು ಸಾಲ 8 ಲಕ್ಷ ಕೋಟಿ ರೂ. ಮೀರಲಿದೆ. ಇದರಿಂದಾಗಿ ಆರ್ಥಿಕ ಶಿಸ್ತು ಮೀರಿ ಹೋಗುತ್ತದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ಇಲ್ಲದ ಆದಾಯವನ್ನು ಸೃಷ್ಟಿಸಿ ಜಿಎಸ್‌ಡಿಪಿಗೆ ಹೋಲಿಕೆ ಮಾಡುವ ಶೇಕಡಾ ಪ್ರಮಾಣವನ್ನು ಕಡಿಮೆ ಇರುವಂತೆ ತೋರಿಸುತ್ತಾರೆ. ಈ ಮೂಲಕ ಆರ್ಥಿಕ ಶಿಸ್ತು ಪಾಲಿಸಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಬಜೆಟ್‌ ಎಂದರೆ ಆದಾಯ ಹೆಚ್ಚಿಸಿ, ಜನರಿಗೆ ಹೊರೆಯಾಗದಂತೆ ಮಾಡಬೇಕು. ಇದನ್ನೇ ಆರ್ಥಿಕ ಪರಿಣತಿ ಎಂದು ಹೇಳುತ್ತಾರೆ. ಸಾಲ ಮಾಡಿ ಸರ್ಕಾರ ನಡೆಸಲು ಇವರೇ ಬೇಕಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಜನರು ಅಂದುಕೊಂಡಿದ್ದು ಸಂಪೂರ್ಣ ಸುಳ್ಳಾಗಿದೆ ಎಂದು ಆರೋಪಿಸಿದರು.

ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲ ಇಲ್ಲದ ಬಜೆಟ್‌ ಮಂಡಿಸಿದ್ದು, ಇನ್ನೂ 24,400 ಕೋಟಿ ರೂ. ಸಾಲ ಪಡೆಯಬಹುದಿತ್ತು. ಅಂತಹ ಅವಕಾಶವಿದ್ದರೂ ಅವರು ಆಗ ಸಾಲ ಪಡೆದಿರಲಿಲ್ಲ. ಕಾಂಗ್ರೆಸ್‌ ಮಾತ್ರ ಪ್ರತಿ ವರ್ಷ ಸಾಲ ಪಡೆಯುತ್ತಲೇ ಇದೆ. ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ ಪಡೆಯಲಿದ್ದಾರೆ. ಸಾಲವನ್ನು ಜನರ ತಲೆ ಮೇಲೆ ಹೇರುವ ಬಜೆಟ್‌ನ್ನು ಈ ಬಾರಿ ಮಂಡಿಸುತ್ತಾರೆ. ನಂಜುಂಡಪ್ಪ ವರದಿಯಲ್ಲಿದ್ದ ಹಿಂದುಳಿದ ತಾಲೂಕುಗಳ ಸಂಖ್ಯೆ, ಗೋವಿಂದರಾವ್‌ ವರದಿಯಲ್ಲಿ ಇನ್ನಷ್ಟು ಅಧಿಕವಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ 15,000 ಕೋಟಿ ರೂ. ಮೀಸಲಿಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ಬಜೆಟ್‌ನಲ್ಲಿ ಸರ್ಕಾರ ಇಷ್ಟೂ ಅನುದಾನವನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಟ ನಡೆಯುತ್ತಿದೆ. ಡಿ. ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಅಂಶಗಳಿರುತ್ತದೆ. ಆದೇಶ ಹೊರಡಿಸಲಾಗಿದೆ, ಅಭಿಪ್ರಾಯ ಸಂಗ್ರಹಣೆ ಎಂಬುದನ್ನೇ ಸಾಧನೆಯಾಗಿ ಈ ಬಜೆಟ್‌ನಲ್ಲಿ ತೋರಿಸುತ್ತಾರೆ. ಪೂರ್ಣವಾಗಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ತೆರಿಗೆಗಳನ್ನು ಸಂಗ್ರಹಿಸುವುದರಲ್ಲೂ ಸರ್ಕಾರ ವಿಫಲವಾಗಿದ್ದು, ಕೇವಲ ಶೇ48ರಷ್ಟು ಸಾಧನೆ ಆಗಿದೆ. ನಿಗದಿ ಮಾಡಿದ ಅನುದಾನದಲ್ಲಿ ಕೆಲವು ಇಲಾಖೆಗಳಿಗೆ ಶೇ 40ರಷ್ಟು ಹಣವನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ, ಇಲಾಖೆಗಳಿಗೆ ಖರ್ಚು ಮಾಡಲು ಹಣವೇ ಇರುವುದಿಲ್ಲ ಎಂದರು.


Spread the love

About Laxminews 24x7

Check Also

ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆ ಆಗಲಿ: ಸಿಎಂ

Spread the loveಬೆಂಗಳೂರು: ದಕ್ಷಿಣ ಭಾರತದಲ್ಲಿ  ಸುಪ್ರೀಂಕೋರ್ಟ್  ಪೀಠ ಸ್ಥಾಪನೆ ಆಗಬೇಕು ಅಂತ ಸಿಎಂ ಸಿದ್ದರಾಮಯ್ಯ  ಒತ್ತಾಯ ಮಾಡಿದ್ದಾರೆ. ಜಿಕೆವಿಕೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ