Breaking News

ಕಿತ್ತೂರು ಹಿರೇನಂದಿಹಳ್ಳಿ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು: ಪತ್ನಿ–ಪುತ್ರ ಸೇರಿ ನಾಲ್ವರ ಬಂಧನ

Spread the love

ಬೆಳಗಾವಿ, ಫೆಬ್ರವರಿ 26: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದ ಅಮಾನುಷ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆಗೈದ ಪ್ರಕರಣದಲ್ಲಿ ಮೃತನ ಪತ್ನಿ ಹಾಗೂ ಪುತ್ರನೇ ಸಂಚಿನಲ್ಲಿ ಭಾಗಿಯಾಗಿದ್ದರೆಂಬ ಅಂಶ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಫೆಬ್ರವರಿ 20ರಂದು ಹಿರೇನಂದಿಹಳ್ಳಿ ಹೊರವಲಯದ ಜಮೀನಿನಲ್ಲಿ ಶವ ಪತ್ತೆಯಾಗಿತ್ತು. ಮೃತರನ್ನು ಹಿರೇನಂದಿಹಳ್ಳಿ ಗ್ರಾಮದ ಕಲ್ಮೇಶ್ ಕೋಟಿ ಎಂದು ಗುರುತಿಸಲಾಯಿತು. ತುಮಕೂರಿನಲ್ಲಿ ಹೋಂ ಕೇರ್ ಉದ್ಯೋಗದಲ್ಲಿದ್ದ ಕಲ್ಮೇಶ್, ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ಬಂದಿದ್ದ ವೇಳೆ ಆರೋಪಿಗಳು ಸಂಚು ರೂಪಿಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆದು ಹತ್ಯೆ

‘ಪಾರ್ಟಿ ಮಾಡೋಣ’ ಎಂಬ ನೆಪದಲ್ಲಿ ಜಮೀನಿಗೆ ಕರೆದೊಯ್ದ ಆರೋಪಿಗಳು ಹಲ್ಲೆ ನಡೆಸಿ, ಮರ್ಮಾಂಗ ಕತ್ತರಿಸಿ ಕೊಲೆಗೈದಿದ್ದಾರೆ. ಬಳಿಕ ಆರೋಪಿಗಳಲ್ಲಿ ಒಬ್ಬರು ತಮ್ಮ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪತ್ನಿ–ಪುತ್ರನ ಡ್ರಾಮಾ ಬಯಲು

ಶವ ಪತ್ತೆಯಾದ ನಾಲ್ಕು ದಿನಗಳ ಬಳಿಕ ಗುರುತು ಪತ್ತೆಗಾಗಿ ಬಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಪತ್ನಿ ಕಸ್ತೂರಿ ಕೋಟಿ ಹಾಗೂ ಪುತ್ರ ಕಿರಣ್ ಕೋಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಕಲ್ಮೇಶ್ ಅವರ ಬಾಮೈದ ಮಲ್ಲೇಶ ಅಂಬಣ್ಣವರ (32) ಹಾಗೂ ಅವನ ಸ್ನೇಹಿತ ಮುದುಕಪ್ಪ ಕೋಲೇಕರ್‌ರನ್ನು ಕಿತ್ತೂರು ಠಾಣೆ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

ಆಸ್ತಿ ವಿವಾದವೇ ಮೂಲ ಕಾರಣ

ಕಲ್ಮೇಶ್ ಮತ್ತು ಪತ್ನಿ ಕಸ್ತೂರಿ ನಡುವೆ ಕಳೆದ 12 ವರ್ಷಗಳಿಂದ ದಾಂಪತ್ಯ ಕಲಹ ಮುಂದುವರಿದಿತ್ತು. ಕಸ್ತೂರಿ ಪುತ್ರನೊಂದಿಗೆ ಕುಂದಗೋಳದಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದರು. ಐದು ವರ್ಷಗಳ ಹಿಂದೆ ಪುತ್ರಿಯ ವಿವಾಹಕ್ಕಾಗಿ 8 ಲಕ್ಷ ರೂ. ಸಾಲವನ್ನು ಸಹೋದರ ಮಲ್ಲೇಶ ಅಂಬಣ್ಣವರಿಂದ ಪಡೆದಿದ್ದ ಕಸ್ತೂರಿ, ಕಲ್ಮೇಶ್ ಹೆಸರಿನ ಮೂರು ಎಕರೆ ಪಿತ್ರಾರ್ಜಿತ ಜಮೀನನ್ನು ಅಡಮಾನ ಇಟ್ಟಿದ್ದಳು ಎನ್ನಲಾಗಿದೆ.

ಆದರೆ ಜಮೀನು ಬರೆದುಕೊಡಲು ಕಲ್ಮೇಶ್ ನಿರಾಕರಿಸಿದ್ದು, ಸಾಲ ಮರುಪಾವತಿಗೆ ಒತ್ತಾಯಿಸಿದ್ದರಿಂದ ದ್ವೇಷ ಗಾಢಗೊಂಡಿತ್ತು. ಪತಿ ಸಾವಿಗೀಡಾದರೆ ಜಮೀನು ತನ್ನ ಹೆಸರಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಸಂಚು ರೂಪಿಸಿ ಕೊಲೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿನಿಂದಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರು, ಆಸ್ತಿ ವಿವಾದವೇ ಕೊಲೆಗೆ ಪ್ರಮುಖ ಕಾರಣ ಎಂಬುದನ್ನು ಪತ್ತೆಹಚ್ಚಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

ಪೊಲೀಸರು ಸ್ಥಳ ಮಹಜರಿಗೂ ಮೊದಲೇ ಕಾರನ್ನು ಬೆಳಗಾವಿ ಹೊರ ವಲಯದಲ್ಲಿರುವ ಶೋರೂಮ್​ಗೆ ಶಿಫ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Spread the loveಬೆಳಗಾವಿ,  ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಇಂದು (ಜನವರಿ 14) ಸಂಕ್ರಾಂತಿ ಹಬ್ಬದ ದಿನವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ