ಬೆಳಗಾವಿ: ವೃದ್ಧರು, ಓದಲು ಬಾರದಿರುವವರು, ದಾಖಲೆಗಳ ಅರಿವು ಇಲ್ಲದವರು, ಜಮೀನು ಬಳಸದಿರುವ ಮಾಲೀಕರನ್ನು ಗುರಿಯಾಗಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಜಮೀನು, ನಿವೇಶನ ಕಬಳಿಸುತ್ತಿದ್ದ ವಂಚಕರ ಜಾಲ ಭೇದಿಸಿ, ಉಪ ನೋಂದಣಾಧಿಕಾರಿ ಸೇರಿ 9 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ, ನಿವೇಶನ ಕಬಳಿಸಿರುವ ಕುರಿತು ಹುಕ್ಕೇರಿಯಲ್ಲಿ 2, ಮೂಡಲಗಿಯಲ್ಲಿ 3 ಹಾಗೂ ಯಮಕನಮರಡಿಯಲ್ಲಿ 1 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿ, ತಹಸೀಲ್ದಾರ ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿ, ಮಧ್ಯವರ್ತಿ ಸೇರಿ ವ್ಯವಸ್ಥಿತ ತಂಡ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದರು.
ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ, ಮಾರಾಟ ಮಾಡಿಸಿದ ಆರೋಪದಡಿ ಹುಕ್ಕೇರಿ ತಾಲೂಕಿನ ಉಪ ನೋಂದಣಾಧಿಕಾರಿ ಮಡಿವಾಳಯ್ಯ ಬಾನಿಮಠ (34), ಬಾಂಡ್ ರೈಟರ್ ಆನಂದ ದಡ್ಡಿಮನಿ (35), ರೇಣುಕಾ ಶಂಕರ ಮಾಳಿ, ಶಿವರುದ್ರ ಕುದ್ನೂರಿ, ಕಾಶವ್ವ ಕುದ್ನೂರಿ, ನೀಲಕಂಠ ಮುದುಪಾಕಿ, ಅಡಿವೆಪ್ಪ ಮುದುಪಾಕಿ, ಸಿದ್ದಯ್ಯ ಹಿರೇಮಠ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಪೈಕಿ ಉಪ ನೋಂದಣಾಧಿಕಾರಿ ಬಾನಿಮಠ, ಬಾಂಡ್ ರೈಟರ್ ಆನಂದ ದಡ್ಡಿಮನಿ ಅವರಿಗೆ ಜಾಮೀನು ಮಂಜೂರಾಗಿದೆ. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ, ಇನ್ನೊಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಂಧಿತ ನೀಲಕಂಠ ಮುದುಪಾಕಿ ಮನೆ ಮೇಲೆ ದಾಳಿ ನಡೆಸಿ, 9 ನಕಲಿ ಆಧಾರ್ ಕಾರ್ಡ್, 3 ನಕಲಿ ಪ್ಯಾನ್ ಕಾರ್ಡ್, ಒಂದು ನಕಲಿ ವೋಟರ್ ಐಡಿ ಸೇರಿ 22 ನಕಲಿ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ೋಟೋ ಸ್ಟುಡಿಯೊ ಒಂದರ ಮೇಲೆ ದಾಳಿ ನಡೆಸಿ, ನಕಲಿ ದಾಖಲೆ ಸೃಷ್ಟಿಸಲು ಬಳಸುತ್ತಿದ್ದ ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಟರ್, ಲ್ಯಾಮಿನೇಟರ್ ಸೇರಿ 6 ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಡಲಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಭೂಕಬಳಿಕೆಯ ಮೂರು ಪ್ರಕರಣಗಳ ತನಿಖೆ ನಡೆಯುತ್ತಿದೆ. ಇದರಲ್ಲಿಯೂ ಸರ್ಕಾರಿ ಸಿಬ್ಬಂದಿ ಭಾಗಿಯಾಗಿರುವುದು ಕಂಡುಬಂದಿದ್ದು, ವಿಚಾರಣೆ ನಡೆಯುತ್ತಿದೆ. ಕೆಲ ಪ್ರಕರಣಗಳಲ್ಲಿ ಒಂದೇ ದಿನದಲ್ಲಿ ಜಮೀನು ಖರೀದಿ ಮತ್ತು ಮಾರಾಟ ನಡೆದಿದೆ. ಈ ನಿಟ್ಟಿನಲ್ಲಿ ಜಮೀನು, ನಿವೇಶನ ಮಾಲೀಕರು ತಮ್ಮ ಆಸ್ತಿಗಳ ದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಯಾವುದೇ ಅನುಮಾನಾಸ್ಪದ ನೋಂದಣಿ ಅಥವಾ ವಂಚನೆ ಕಂಡುಬಂದರೆ ತಣ ಪೊಲೀಸರಿಗೆ ದೂರು ನೀಡಬೇಕು ಎಂದು ಎಸ್ಪಿ ಎಚ್ಚರಿಸಿದರು.
ಸುಳ್ಳು ಸಂಬಂಧಿಕರ ಸೃಷ್ಟಿ!
ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ಅಕ್ರಮವಾಗಿ ಭೂಮಿ ಕಬಳಿಸಲು ಆರೋಪಿತರು ನಕಲಿ ಕೌಟುಂಬಿಕ ಸಂಬಂಧಗಳನ್ನೇ ಸೃಷ್ಟಿಸಿ ದಾಖಲೆ ತಯಾರಿಸಿದ್ದರು. ಜಮೀನಿನ ಮೂಲ ಮಾಲೀಕರು ಎಂದು ಸಾಬೀತುಪಡಿಸಲು ನಕಲಿ ತಂದೆ&ತಾಯಿ, ಮಕ್ಕಳನ್ನು ಸೃಷ್ಟಿಸಿ, ಆಧಾರ್ ಕಾರ್ಡ್, ಪ್ಯಾನ್ಕಾರ್ಡ್ ಸಿದ್ಧಪಡಿಸಿದ್ದರು. ನೋಂದಣಿ ವೇಳೆ ದಾಖಲೆಗಳು ಅಸಿಂಧುವಾಗಿರುವ ಕಾರಣ ಪ್ರಕ್ರಿಯೆ ರದ್ದಾಗಿತ್ತು. ಆದರೆ, ಉಪ ನೋಂದಣಾಧಿಕಾರಿ, ಮಧ್ಯಪ್ರವೇಶಿಸಿ, ಯಾವುದೇ ದಾಖಲೆಗಳನ್ನು ಪರಿಶೀಲಿಸದೇ ನೋಂದಣಿ ಮಾಡಿಸಿದ್ದರು. ಇದು ವ್ಯವಸ್ಥಿತವಾಗಿ ನಡೆಸಿದ ವಂಚನೆ ಕೃತ್ಯ ಎಂಬುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7