Breaking News

ತರಳಬಾಳು ಹುಣ್ಣಿಮೆ ವೇದಿಕೆ | ದೂಷಣೆ ಬಿಟ್ಟು ಒಂದಾಗಿ: ಶ್ರೀಗಳ ತಾಕೀತು.

Spread the love

ಭದ್ರಾವತಿ (ಶಿವಮೊಗ್ಗ): ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವು ‘ದಾವಣಗೆರೆ ರಾಜಕಾರಣ’ದ ರಾಜಿ ಪಂಚಾಯಿತಿಗೆ ವೇದಿಕೆ ಆಗಿ ಮಾರ್ಪಟ್ಟಿತ್ತು. ದೀರ್ಘ ಕಾಲದಿಂದ ಪರಸ್ಪರ ರಾಜಕೀಯ ಹಗೆತನ ಸಾಧಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹಾಗೂ ಹರಿಹರ ಶಾಸಕ ಬಿ.‍ಪಿ.ಹರೀಶ್ ಅವರಿಗೆ ‘ರಾಜಕೀಯ ಸಭ್ಯತೆ’ಯ ಪಾಠ ಹೇಳಿದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಅವರ ನಡುವಿನ ಜಗಳ ಪರಿಹರಿಸಿ ವೇದಿಕೆಯಲ್ಲಿಯೇ ರಾಜಿ ಮಾಡಿಸಿದರು.
ಮಲ್ಲಿಕಾರ್ಜುನ್ ಹಾಗೂ ಸಿದ್ದೇಶ್ವರ ಇಬ್ಬರೂ ಈಗ ಉತ್ತರ ಮತ್ತು ದಕ್ಷಿಣ ಧ್ರುವ. ಜೊತೆಗೆ ಬಿ.ಪಿ.ಹರೀಶ್‌ ಕೂಡ ಮಲ್ಲಿಕಾರ್ಜುನ್‌ ವಿರುದ್ಧ ದೂಷಣೆ ಮಾಡುತ್ತಿದ್ದಾರೆ. ಅದನ್ನು ವಾಟ್ಸ್‌ಆಯಪ್‌ನಲ್ಲಿ ನೋಡಿದ್ದೇನೆ. ಎಲ್ಲರೂ ಒಂದೇ ಮನೆತನ ಇದ್ದಂತೆ. ಸಮಸ್ಯೆಗಳಿದ್ದರೆ ಖಾಸಗಿಯಾಗಿ ಕುಳಿತು ಮಾತಾಡಿಕೊಳ್ಳಬೇಕು. ಜಗಳ ಬೇಡ’ ಎಂದು ಕಿವಿಮಾತು ಹೇಳಿದರು.

‘ಮಲ್ಲಿಕಾರ್ಜುನ್‌ ಹಾಗೂ ಸಿದ್ದೇಶ್ವರ ಇಬ್ಬರೂ ಮಾವ-ಅಳಿಯಂದಿರು. ಪರಸ್ಪರ ಸಂಬಂಧಿಕರು. ಇಬ್ಬರನ್ನೂ ಕರೆಸಿ ಮಾತಾಡಬೇಕು, ಎರಡೂ ಕುಟುಂಬಗಳ ನಡುವೆ ಹೆಣ್ಣು-ಗಂಡು ಕೊಡಿಸಿ ಮದುವೆ ಮಾಡಿಸಿ ಜಗಳಕ್ಕೆ ಶಾಶ್ವತವಾಗಿ ಇತಿಶ್ರೀ ಹಾಡಬೇಕು ಅಂದುಕೊಂಡಿದ್ದೇನೆ. ಮಹಾಭಾರತದಲ್ಲಿ ಪಾಂಡವರು-ಕೌರವರು ಸಂಬಂಧಿಕರು. ಅವರೇ ಹೊಡೆದಾಡಿಕೊಂಡರು. ಹಾಗಾಗಿ ಇನ್ನು ಮುಂದೆ ‍ಪರಸ್ಪರ ದೂಷಣೆ ಮಾಡುವಂತಿಲ್ಲ. ಮುಂದೆ ಯಾವುದೇ ಕಾರಣಕ್ಕೂ ಶಾಮನೂರು ಕುಟುಂಬದ ಬಗ್ಗೆ ಕೆಟ್ಟ ಮಾತುಗಳನ್ನು ಆಡಬಾರದು. ನೀವೆಲ್ಲರೂ ಹಾವು ಮುಂಗುಸಿ ಆಗುವುದು ಬೇಡ’ ಎಂದು ಬಿ.ಪಿ.ಹರೀಶ್ ಅವರಿಗೆ ಸೂಚಿಸಿದರು.

ಈ ವೇಳೆ ತಮ್ಮ ಎದುರು ವಿಧೇಯ ವಿದ್ಯಾರ್ಥಿಗಳಂತೆ ನಿಂತ ಮೂವರು ನಾಯಕರಿಂದಲೂ ಶ್ರೀಗಳು ಕಾಲಿಗೆ ನಮಸ್ಕರಿಸಿಕೊಂಡರು. ‘ಶಿಷ್ಯರೆಲ್ಲರೂ ಒಂದೇ ಕಡೆ ಸಿಕ್ಕು, ಪರಸ್ಪರರು ಒಂದಾಗಿದ್ದೀರಿ. ಇದು ಭದ್ರಾವತಿ ತರಳಬಾಳು ಹುಣ್ಣಿಮೆಯ ಯಶಸ್ಸು’ ಎಂದು ಶ್ರೀಗಳು ಬಣ್ಣಿಸಿದರು. ಈ ವೇಳೆ ನೆರೆದವರು ಕೇಕೆ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್‌.ಬಸವಂತಪ್ಪ, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಇದ್ದರು.
ಭದ್ರಾವತಿಯಲ್ಲಿ ಭಾನುವಾರ ನಡೆದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವದ ನೋಟದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಬಸವಣ್ಣನವರ ಆಶಯ. ಈ ದೇಶ ಎಲ್ಲರಿಗೂ ಸೇರಿದ್ದು ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ನಮ್ಮ ಶಕ್ತಿಯಾಗಿದೆ. ಮನುಷ್ಯನ ಭಾವನೆ ಬಹಳ ಮುಖ್ಯ. ನಮ್ಮ ಜಾತಿ ನಮ್ಮ ಮನೆಯ ಒಳಗಡೆ ಇರಬೇಕು ಹೊರಗಡೆ ಮನುಷ್ಯತ್ವ ಕಾಣಬೇಕು.
ಕುಸ್ತಿ; ಯೋಗೇಶ್‌ಗೆ ‘ತರಳಬಾಳು ಕಂಠೀರವ’ ಪ್ರಶಸ್ತಿ

ತರಳಬಾಳು ಹುಣ್ಣಿಮೆ ಅಂಗವಾಗಿ ಭಾನುವಾರ ನಡೆದ ರಾಷ್ಟ್ರಮಟ್ಟದ ಪುರುಷರ ಮುಕ್ತ ಕುಸ್ತಿ ಟೂರ್ನಿಯಲ್ಲಿ ‘ಶ್ರೀ ತರಳಬಾಳು ಕಂಠೀರವ’ ಪ್ರಶಸ್ತಿಗೆ ಯೋಗೇಶ್ ದಾವಣಗೆರೆ ಭಾಜನರಾಗಿ ₹15000 ನಗದು ಹಾಗೂ ಬೆಳ್ಳಿ ಗದೆ ಪಡೆದರು. ‘ತರಳಬಾಳು ಕೇಸರಿ’ ಪ್ರಶಸ್ತಿಗೆ ಭಾಜನರಾದ ಸತ್ಯರಾಜು.ಎಂ.ಬೆನಕನಹಳ್ಳಿ ₹12500 ನಗದು ಹಾಗೂ ಬೆಳ್ಳಿ ಗದೆ ಪಡೆದರು. ‘ತರಳಬಾಳು ಕುಮಾರ’ ಪ್ರಶಸ್ತಿಗೆ ಭಾಜನರಾದ ಯುವರಾಜ ಎಚ್.ಬೆನಕನಹಳ್ಳಿ ₹9000 ನಗದು ಹಾಗೂ ಬೆಳ್ಳಿ ಗದೆ ಪಡೆದರು. ದಾವಣಗೆರೆ ಬೆಳಗಾವಿ ಹುಬ್ಬಳ್ಳಿ ಹರಿಹರ ಮೈಸೂರು ಕನಕಪುರ ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ 150ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.

ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಿಂಹಾಸನಾರೋಹಣ

ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಭಾನುವಾರ ನಡೆಯಿತು. ಈ ವೇಳೆ ಸಿರಿಗೆರೆ ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿಂಹಾಸನಾರೋಹಣ ಮಾಡಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಬೃಹನ್ಮಠದಿಂದ ಹುತಾತ್ಮ ಸೈನಿಕರ 10 ಕುಟುಂಬಗಳಿಗೆ ತಲಾ ₹1 ಲಕ್ಷ ಆರ್ಥಿಕ ನೆರವು ನೀಡಲಾಯಿತು. ಸಮಾರೋಪಕ್ಕೂ ಮುನ್ನ ನಗರದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಬೆಳ್ಳಿ ಪಲ್ಲಕ್ಕಿ ಉತ್ಸವವು ತೆರೆದ ವಾಹನದಲ್ಲಿ ವಿಜೃಂಭಣೆಯಿಂದ ಜರುಗಿತು. ಅಡ್ಡಪಲ್ಲಕ್ಕಿ ಉತ್ಸವ ಚನ್ನಗಿರಿ ರಸ್ತೆಯ ಎ.ಪಿ.ಎಂ.ಸಿ ಮುಂಭಾಗದಿಂದ ಆರಂಭವಾಗಿ ರಂಗಪ್ಪ ವೃತ್ತ ಮಾಧವಾಚಾರ್ ವೃತ್ತ ಡಾ.ರಾಜಕುಮಾರ್ ರಸ್ತೆ ಮೂಲಕ ಹಾಲಪ್ಪ ವೃತ್ತ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಕೆ.ಎಸ್.ಆರ್.ಟಿ.ಸಿ ಮುಖ್ಯ ಬಸ್ ನಿಲ್ದಾಣ ರಿಲಯನ್ಸ್ ಪೆಟ್ರೋಲ್ ಬಂಕ್ ಮೂಲಕ ಹುತ್ತಾ ಕಾಲೊನಿವರೆಗೆ ಸಾಗಿತು. ಶ್ರೀಮಠದ ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಶ್ರಿಮಠದ ವಿದ್ಯಾರ್ಥಿಗಳು ಶಿವಧ್ವಜ ಹಿಡಿದು ಮಹಿಳೆಯರು ಬಣ್ಣದ ಸೀರೆಯನ್ನುಟ್ಟು ಕುಂಭಮೇಳ ಹೊತ್ತು ಡೊಳ್ಳುಕುಣಿತದ ಜೊತೆಗೆ ಸಾಗಿದರು.


Spread the love

About Laxminews 24x7

Check Also

ಮಹಾಜನ ವರದಿಯೇ ಅಂತಿಮ ಎಂದು ನಿರ್ಣಯ ಕೈಗೊಳ್ಳಲು ಕನ್ನಡಪರ ಸಂಘಟನೆಗಳ ಒತ್ತಾಯ

Spread the loveಬೆಳಗಾವಿ: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಮಹಾಜನ ವರದಿಯೇ ಅಂತಿಮ ಎಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಬೆಳಗಾವಿ ಮಹಾನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ