ಬೆಂಗಳೂರು: ಸರಗೂರು ತಾಲೂಕಿನಲ್ಲಿ ಪದೇ ಪದೆ ಜನರ ಮೇಲೆ ದಾಳಿ ಮಾಡಿ ಜನ, ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂವರ ಮೇಲೆ ದಾಳಿ ಮಾಡಿ, ಅವರ ಸಾವಿಗೆ ಕಾರಣವಾಗಿದ್ದ ಈ ಹುಲಿಯನ್ನು ಸೆರೆ ಹಿಡಿದಿರುವುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸಚಿವರು ಹೇಳಿದ್ದಾರೆ.
ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಈ ಹುಲಿಯ ಡಿಎನ್ಎ ಎರಡನ್ನೂ ಪರಿಶೀಲಿಸಿ, ಸೆರೆ ಹಿಡಿಯಲಾದ ಹುಲಿ ಹೆಡಿಯಾಲ, ಮೊಳೆಯೂರು, ನುಗು ಸುತ್ತಮುತ್ತ ಜನರ ಅಮೂಲ್ಯ ಜೀವ ಹಾನಿ ಮಾಡಿದ ಹುಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಬಂಡಿಪುರ ಮತ್ತು ನಾಗರಹೊಳೆಯ ಅರಣ್ಯದಂಚಿನಲ್ಲಿ ಹುಲಿಗಳು ಮನುಷ್ಯರ ಮೇಲೆ ಮತ್ತು ಜಾನುವಾರಗಳ ಮೇಲೆ ದಾಳಿ ಮಾಡುವ ಪ್ರಕರಣಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆಯ ಸಫಾರಿ ಸ್ಥಗಿತಗೊಳಿಸಿ, ಅಲ್ಲಿನ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಬಂಡಿಪುರ ಮತ್ತು ನಾಗರಹೊಳೆಯ ವಿವಿಧ ವಲಯಗಳ ಅಧಿಕಾರಿಗಳ ಜೊತೆಗೆ ಇತರ ವಲಯಗಳ ಅಧಿಕಾರಿ ಮತ್ತು ಸಿಬ್ಬಂದಿಯೂ ಹುಲಿ ಸೆರೆ ಕಾರ್ಯಾಚರಣೆಲ್ಲಿ ಭಾಗಿಯಾಗಿ ಹುಲಿಯನ್ನು ಹಿಡಿದಿದ್ದಾರೆ. ಈ ಹುಲಿಗೆ ಸುಮಾರು 12-13 ವರ್ಷ ವಯಸ್ಸಾಗಿದ್ದು, ಹಲ್ಲುಗಳು ಬಲಹೀನವಾಗಿವೆ. ಹೀಗಾಗಿ ಅರಣ್ಯದಲ್ಲಿ ಸಸ್ಯಹಾರಿ ವನ್ಯಜೀವಿಗಳ ಬೇಟೆ ಆಡಲು ಅಶಕ್ತವಾಗಿದ್ದ ಈ ಗಂಡು ಹುಲಿ, ಪಕ್ಕದ ಗ್ರಾಮಗಳಿಗೆ ನುಗ್ಗಿ ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಈಶ್ವರ ಖಂಡ್ರೆ ವಿವರಿಸಿದ್ದಾರೆ.
Laxmi News 24×7