ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಗೌರಿ ಹುಣ್ಣಿಮೆಯಂದು ಹಾಗೂ ಛಟ್ಟಿ ಅಮವಾಸ್ಯೆವರೆಗೆ ಪ್ರತಿ ಶುಕ್ರವಾರ, ಭಾನುವಾರ ಮತ್ತು ಮಂಗಳವಾರದಂದು ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನ ಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಶೀಗಿ ಹುಣ್ಣಿಮೆಯಿಂದ ದೀಪಾವಳಿ ಅಮವಾಸೆಯವರೆಗಿನ ಅವಧಿಯಲ್ಲಿ ಮಾಡಲಾಗಿದ್ದ ವಿಶೇಷ ಬಸ್ಗಳಿಗೆ ಭಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವೇಳೆ 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು, ಸಾರ್ವಜನಿಕರು ಪ್ರಯಾಣ ಮಾಡಿದ್ದಾರೆ. ರೇಣುಕಾದೇವಿ ದರ್ಶನಕ್ಕೆ ಹೋಗಿಬರಲು ಈ ವಿಶೇಷ ಬಸ್ ಗಳಿಂದ ಭಕ್ತಾದಿಗಳಿಗೆ ಬಹಳಷ್ಟು ಅನುಕೂಲವಾವಾಗಿದೆ. ಆದ್ದರಿಂದ ಗೌರಿ ಹುಣ್ಣಿಮೆಯಂದು ಹಾಗೂ ಛಟ್ಟಿ ಅಮಾವಾಸ್ಯೆಯವರೆಗೆ ಪ್ರತಿ ಶುಕ್ರವಾರ, ಭಾನುವಾರ ಹಾಗೂ ಮಂಗಳವಾರಂದು ಈ ವಿಶೇಷ ಬಸ್ ಗಳ ಸೌಲಭ್ಯವನ್ನು ಮಾಡುವಂತೆ ಬೇಡಿಕೆ ಬಂದಿರುತ್ತದೆ. ಅದರಂತೆ ನವೆಂಬರ್ 7, 9, 11, 14, 16 ಹಾಗೂ18 ರಂದು ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರವಾಗಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ- ಯಲ್ಲಮ್ಮನಗುಡ್ಡ: ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ. ಧಾರವಾಡ, ಇನಾಮಹೊಂಗಲ, ಸವದತ್ತಿ ಮಾರ್ಗವಾಗಿ ಸಂಚರಿಸುತ್ತವೆ.
ನವಲಗುಂದ- ಯಲ್ಲಮ್ಮನಗುಡ್ಡ: ಗೊಬ್ಬರಗುಂಪಿ, ಅಳಗವಾಡಿ, ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ ಎಂದು ರಾಮನಗೌಡರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi News 24×7