ಚಾಮರಾಜನಗರ: ಬಂಡೀಪುರ, ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಇದು ತಹಬದಿಗೆ ಬಾರದಿದ್ದರೆ ಸಫಾರಿಯನ್ನು ಸಂಪೂರ್ಣ ಬಂದ್ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ಚಾಮರಾಜನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ಅರಣ್ಯ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವನ್ಯಜೀವಿ-ಮಾನವ ಸಂಘರ್ಷ ಇರುವ ಸ್ಥಳದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಎನ್ನುತ್ತೀರಿ. ಹಾಗಾದರೆ ಸಫಾರಿಗೆ ನಿಯೋಜಿಸಿರುವ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಬೇಕಾಗುತ್ತದೆ ಎಂದು ಹೇಳಿದರು.
ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಕಂದಾಯ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯದ ಕೊರತೆ, ಪರಸ್ಪರ ದೋಷಾರೋಪವನ್ನು ಸರ್ಕಾರ ಕ್ಷಮಿಸುವುದಿಲ್ಲ, ಸಬೂಬುಗಳಿಗೆ ಅವಕಾಶವಿಲ್ಲ. ಎಲ್ಲ ಇಲಾಖೆಗಳೂ ಜೊತೆಗೂಡಿ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಬೇಕು ಎಂದು ಸೂಚಿಸಿದರು.
ಅಕ್ರಮ ಹೋಂ ಸ್ಟೇ, ರೆಸಾರ್ಟ್ಗೆ ಅವಕಾಶವಿಲ್ಲ: ಚಾಮರಾಜನಗರದಲ್ಲಿ ಇಂದು ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಅಧಿಕಾರಿಗಳು, ರೈತರ ಜೊತೆ ಸಭೆ ನಡೆಸಿ ಮಾತನಾಡಿದ ಸಚಿವರು, ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ, ಹೋಂ ಸ್ಟೇ, ರೆಸಾರ್ಟ್ ನಡೆಯುವ ಬಗ್ಗೆ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವ ಭರವಸೆ ನೀಡಿದರು
ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಅಕ್ರಮ ಹೋಂ ಸ್ಟೇ, ರೆಸಾರ್ಟ್ಗಳು ಅಥವಾ ಅಕ್ರಮ ಕಲ್ಲು ಗಣಿಗಾರಿಕೆಗೆ ನಮ್ಮ ಸರ್ಕಾರ ಅವಕಾಶ ನೀಡಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಮಾನವ-ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ. ನೂರಾರು ವರ್ಷದಿಂದ ಇದೆ. ಈಗ ವನ್ಯಜೀವಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಇದರಿಂದ ಸಂಘರ್ಷ ಹೆಚ್ಚಳವಾಗುತ್ತಿದೆ. ಸ್ಥಳೀಯರ, ಸಾರ್ವಜನಿಕರ, ರೈತರ ಸಲಹೆ, ಅಭಿಪ್ರಾಯ ಪಡೆದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈ ಸಭೆ ನಡೆಸಲಾಗಿದೆ ಎಂದರು.
ಈಗಾಗಲೇ ಇಲಾಖೆಯ ವತಿಯಿಂದ ಎರಡು ತಜ್ಞರ ಸಮಿತಿ ರಚಿಸಲಾಗಿದೆ. ವನ್ಯಜೀವಿಗಳು ನಾಡಿಗೆ ಬರುತ್ತಿರುವ ಬಗ್ಗೆ ಅಧ್ಯಯನ ಮಾಡಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಇದರ ಜೊತೆಗೆ ಇಂದಿನ ಸಭೆಯಲ್ಲಿ ನೀಡಿರುವ ಎಲ್ಲ ಸಲಹೆಗಳನ್ನು ಕ್ರೋಢೀಕರಿಸಿ, ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ವನ್ಯಜೀವಿಯಿಂದ ಬೆಳೆ ಹಾನಿ, ಜಾನುವಾರು ಹಾನಿ ಆದಾಗ ಪರಿಹಾರ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
Laxmi News 24×7