Breaking News

ಹೋರಿ ಬೆದರಿಸುವ ಸ್ಪರ್ಧೆಯ ಆಯೋಜಕರು ಹಾಗೂ ಮಾಲೀಕರ ವಿರುದ್ದ ಕೇಸ್: ಎಸ್​ಪಿ ಯಶೋಧಾ ವಂಟಗೋಡಿ

Spread the love

ಹಾವೇರಿ : ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಎತ್ತುಗಳನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿ, ನಂತರ ದೇವಾಲಯಕ್ಕೆ ಹೋಗಿ ಅವುಗಳನ್ನು ಮೆರವಣಿಗೆ ಮಾಡುವ ಸಂಪ್ರದಾಯ ಇದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಮೆರವಣಿಗೆ ಸಮಯದಲ್ಲಿ ಅವರು ಹೋರಿಯನ್ನು ಬೆದರಿಸಿದ್ದರಿಂದಾಗಿ ಅವು ಹೆದರಿ ಓಡಿದ್ದರಿಂದಾಗಿ ನಮ್ಮಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ, ದನ ಬೆದರಿಸುವ ಸ್ಪರ್ಧೆಯ ಆಯೋಜಕರು ಹಾಗೂ ಹೋರಿ ಮಾಲೀಕರ ಮೇಲೆ ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ಎಸ್​ಪಿ ಯಶೋಧಾ ವಂಟಗೋಡಿ ಅವರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ‘ತಿಳುವಳ್ಳಿಯಲ್ಲಿ ಹೋರಿ ಬರುವಾಗ ಯುವಕ ಅಡ್ಡ ಹೋಗಿದ್ದಾನೆ. ಆಗ ಹೋರಿ ಗುದ್ದಿದ್ದರಿಂದಾಗಿ ತಲೆಗೆ ಪೆಟ್ಟಾಗಿ ಬಿದ್ದು ಸತ್ತಿದ್ದಾನೆ. ಇನ್ನು ಮೂರು ಪ್ರಕರಣಗಳಲ್ಲಿ ಹೋರಿ ತಪ್ಪಿಸಿಕೊಂಡು ಓಣಿಯಲ್ಲಿ ಕುಳಿತವರು ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಗುದ್ದಿ ಮೂವರು ಸತ್ತಿದ್ದಾರೆ. ಹಾನಗಲ್ ಪ್ರಕರಣ ಸೇರಿದಂತೆ ನಾಲ್ಕು ಎಫ್​ಐಆರ್​​ಗಳನ್ನು ದಾಖಲಿಸಿಕೊಂಡಿದ್ದೇವೆ’ ಎಂದಿದ್ದಾರೆ.

ಇನ್ನು ಮುಂದೆ ನಡೆಯುವ ಸ್ಪರ್ಧೆಗಳಿಗೆ ಯಾವ ರೀತಿ ಕಡಿವಾಣ ಹಾಕಲಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಸಂಘಟಕರು ಸಾರ್ವಜನಿಕ ಸ್ಥಳಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದು ಸ್ಪರ್ಧೆ ಆಯೋಜಿಸಬೇಕು ಎಂದು ಸರ್ಕಾರದಿಂದ ಅಧಿಸೂಚನೆ ಬಂದಿದೆ, ಅದರ ಷರತ್ತುಗಳು ಉಲ್ಲಂಘನೆ ಆಗದಂತೆ ನಡೆಸಬೇಕು’ ಎಂದು ಹೇಳಿದ್ದಾರೆ.

ಹಬ್ಬಗಳಲ್ಲಿ ಹೋರಿ ಮೆರವಣಿಗೆ ಮಾಡಲು ನಮ್ಮ ಅಭ್ಯಂತರವಿಲ್ಲ. ಕೈಯಲ್ಲಿ ಹಗ್ಗ ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗಿ ಸಂಪ್ರದಾಯದಂತೆ ಮೆರವಣಿಗೆ ಮಾಡುವುದನ್ನು ನಾವು ಬೇಡ ಎಂದು ಹೇಳುತ್ತಿಲ್ಲ. ಸಾಂಪ್ರದಾಯಿಕವಾಗಿ ಹಬ್ಬ ಆಚರಣೆ ಮಾಡಲು ನಮಗೆ ಯಾವುದೇ ಅಭ್ಯಂತರವಿಲ್ಲ. ಈಗಾಗಲೇ ನಾಲ್ಕು ಸಾವುಗಳಾಗಿವೆ. ಸಂಪ್ರದಾಯದಂತೆ ಕೈಯಲ್ಲಿ ಹಗ್ಗ ಹಿಡಿದು ಹೋರಿಗಳನ್ನು ಮೆರವಣಿಗೆ ಮಾಡಿಸಿ ನಂತರ ಸುರಕ್ಷಿತವಾಗಿ ಮನೆಗೆ ಕರೆದೊಯ್ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

ಹೋರಿ ಬೆದರಿಸುವ ಸ್ಪರ್ಧೆಗೆ ಕೆಲವರು ಬೇಕು ಎಂದು ಇನ್ನು ಕೆಲವರು ಬೇಡ ಎನ್ನುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪರ -ವಿರೋಧ ಇದ್ದೇ ಇರುತ್ತೆ, ಇದು ಕಾನೂನು ಬಾಹಿರವಾಗಿರುವುದರಿಂದಾಗಿ ಇದಕ್ಕೆ ಅವಕಾಶವೇ ಇಲ್ಲ. ಸರ್ಕಾರದ ಷರತ್ತುಗಳನ್ನು ಪಾಲಿಸದಿದ್ದರೆ ಅವರಿಗೆ ಅನುಮತಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಹೋರಿಗಳನ್ನು ಪರೀಕ್ಷೆ ಮಾಡುವಂತೆ ಪಶು ವೈದ್ಯಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ. ಹೋರಿಗಳಿಗೆ ಏನಾದರೂ ತಿನ್ನಿಸಿದ್ದೀರಾ ಅಥವಾ ಏನಾದರೂ ಸೇವನೆ ಮಾಡಿಸಿದ್ದಾರಾ ಎಂಬುದರ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತದಿಂದ ಅನುಮತಿ ಕಡ್ಡಾಯವಾಗಿ ಪಡೆಯಲೇಬೇಕು ಎಂದು ಎಸ್ಪಿ ಯಶೋಧಾ ಅವರು ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ