ಬೆಂಗಳೂರು: “ಸೂರ್ಯನಿಗೂ ಚಂದ್ರನಿಗೂ, ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ತಿಳಿದುಕೊಂಡು ಸಿಎಂ ಮುಂದೆ ಆ ಥರ ಹೇಳಿಕೆ ಕೊಡಲಿ” ಎಂದು ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ಹಲವು ಬಾರಿ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಅವರ ಸ್ಥಾನಕ್ಕೆ ಶೋಭೆ ತರದ ಹಾಗೆ ವೈಯಕ್ತಿಕ ಟೀಕೆ ಮಾಡ್ತಾರೆ. ಹಿಂದೆ ಚುನಾವಣೆ ವೇಳೆಯೂ ಟೀಕಿಸಿದ್ರು. ಅವರು ಹಿರಿಯರು, ಅವರಿಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ವಾ? ಅಮಾವಾಸ್ಯೆಗೂ ಸೂರ್ಯ ಇರ್ತಾನೆ, ಹುಣ್ಣಿಮೆಗೂ ಸೂರ್ಯ ಇರ್ತಾನೆ. ಅಮಾವಾಸ್ಯೆಗೆ ಇಲ್ಲದಿರೋದು ಚಂದ್ರ. ಸೂರ್ಯನಿಗೂ ಚಂದ್ರನಿಗೂ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ತಿಳ್ಕೊಂಡು ಮುಂದೆ ಈ ತರ ಹೇಳಿಕೆ ಕೊಡಲಿ. ಸೂರ್ಯ ಎಂದಿಗೂ ಇರ್ತಾನೆ. ಈ ಬೇಸಿಕ್ಸ್ ಅರ್ಥ ಮಾಡಿಕೊಂಡು ಸಿಎಂ ಮಾತಾಡಲಿ. ನಾನು ಸಹ ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡಬಹುದು. ನಾನು ಆ ರೀತಿ ಟೀಕೆ ಮಾಡಲ್ಲ. ಅದು ನಮ್ಮ ಸಂಸ್ಕಾರ ಅಲ್ಲ. ನಮ್ಮ ಪಕ್ಷದ ಸಂಸ್ಕಾರವೂ ಅಲ್ಲ” ಎಂದು ಕಿಡಿ ಕಾರಿದರು.
“ಸಿದ್ದರಾಮಯ್ಯ ಆಡಳಿತಕ್ಕೆ ಗ್ರಹಣ ಹಿಡಿದಿದೆ. ಗುಂಡಿ ಇಲ್ಲದ ರಸ್ತೆ ಇಲ್ಲವೇ ಇಲ್ಲ. ಆಡಳಿತ ಎಷ್ಟು ಚೆನ್ನಾಗಿದೆ ಅಂತ ರಸ್ತೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಇದು ಸಿದ್ದರಾಮಯ್ಯ ಆಡಳಿತದ ವೈಖರಿ. ಬೆಂಗಳೂರಿಲ್ಲಿ ಒಂದು ಕಿ.ಮೀ ರೋಡ್ ಸರಿಯಿಲ್ಲ, ಅರ್ಧ ಕಿಮೀ ಫುಟ್‌ಪಾತ್ ಸರಿಯಿಲ್ಲ. ನೀವು ಮೋದಿಯವರಿಗೆ ಪ್ರಶ್ನೆ ಕೇಳ್ತೀರಿ. ಒಂದೇ ವಾರದಲ್ಲಿ ಬೆಂಗಳೂರಿನಲ್ಲಿ ಮೂರು ರೇಪ್, ಮರ್ಡರ್ ಆಗುತ್ತದೆ. ಮೈಸೂರಲ್ಲೂ ಬಾಲಕಿ ರೇಪ್ ಆಗಿದೆ. ಇದರ ಬಗ್ಗೆ ನೀವ್ಯಾರೂ ಮಾತಾಡಲ್ಲ. ನಿಮ್ಮ ಗೃಹ ಸಚಿವರು ಬೆಟ್ಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ನಮಗೆ ಗೂಗಲ್ ಎಐ ಕಂಪನಿ ಕೈತಪ್ಪುತ್ತೆ. ನಿಮ್ಮ ಐಟಿ ಮಿನಿಸ್ಟರ್ ಆರ್ಎಸ್ಎಸ್ ಬ್ಯಾನ್ ಮಾಡೋದ್ರಲ್ಲಿ ಬ್ಯುಸಿ ಇದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಧಾರವಾಡದಲ್ಲಿ ಸರ್ಕಾರಿ ನೌಕರಿ ಸಿಗ್ತಿಲ್ಲ ಅಂತ ಯುವಕರು ಬೀದಿಗೆ ಬಂದಿದ್ರು. ಶಿಕ್ಷಕರ ಸಮಸ್ಯೆ ಬಹಳಷ್ಟಿದೆ. ರಾಜ್ಯದ ಆದಾಯ ಕಾಂಗ್ರೆಸ್ ಫಂಡ್ಗೆ ಬಳಕೆ ಮಾಡ್ತಿದ್ದೀರಿ. ನಮ್ಮ ಸರ್ಕಾರ ಅಂತ್ಯ ಆದಾಗ ಆದಾಯದ ಬಜೆಟ್ ಕೊಟ್ಟು ಹೋಗಿದ್ವಿ, ಈಗ ನೀವು ಕೊರತೆ ಬಜೆಟ್ ಮಂಡಿಸ್ತಿದ್ದೀರಿ. ಅಭಿವೃದ್ಧಿಗೆ ಹಣ ಕೊಡ್ತಿಲ್ಲ ಅಂತ ನಿಮ್ಮ ಶಾಸಕರೇ ಮಾತಾಡ್ತಿದ್ದಾರೆ. ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಹಣ ಹೋಗ್ತಿದೆ. ಕರ್ನಾಟಕದ ಜನ ಗ್ಯಾರಂಟಿಗಳಿಂದ ಸ್ವಾವಲಂಬಿಗಳಾಗದ ಯೋಜನೆ ಗ್ಯಾರಂಟಿಗಳನ್ನು ಕೊಟ್ಟಿದ್ದೀರಿ. ರಾಜ್ಯಕ್ಕೆ ಗ್ರಹಣ ಹಿಡಿದಿದೆ. ಆ ಗ್ರಹಣ ಮತ್ತೆ ಬಿಡುತ್ತೆ, ಮತ್ತೆ ರಾಜ್ಯ ಬೆಳಗುತ್ತೆ” ಎಂದು ಟೀಕಿಸಿದರು.
“ನಾನು ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ. ಅವರು ನನ್ನ ತಂದೆಯ ವಯಸ್ಸಿನವರು. ಸಿದ್ದರಾಮಯ್ಯ ಅವರ ವೈಯಕ್ತಿಕ ಟೀಕೆ ಮಾಡುವಷ್ಟು ನಮ್ಮ ಪಕ್ಷದಲ್ಲಿ ಕಲಿಸಿಲ್ಲ. ಅದು ನಮ್ಮ ಸಂಸ್ಕಾರ ಅಲ್ಲ. ಮೋದಿ ಆಡಳಿತ ಟೀಕೆ ಮಾಡ್ತೀರಿ, ನಿಮ್ಮ ಆಡಳಿತದ ಬಗ್ಗೆ ಹೇಳಬೇಕಲ್ವಾ.?. ಬೆಂಗಳೂರು ರಸ್ತೆ ಗುಂಡಿಗಳೇ ಅದಕ್ಕೆ ತಾಜಾ ಉದಾಹರಣೆ. ನಾನು ಹಬ್ಬಕ್ಕೆ ಚಿಕ್ಕಮಗಳೂರು ಹೋಗಿದ್ದೆ. ರಾಷ್ಟ್ರೀಯ ಹೆದ್ದರಿ ಬಿಟ್ರೆ, ರಾಜ್ಯದ ರಸ್ತೆಗೆ ಬಂದ್ರೆ ರಸ್ತೆ ಗುಂಡಿಗಳೇ ಇದೆ. ಅಮಾವಾಸ್ಯೆ, ಗ್ರಹಣ, ಸೂರ್ಯ ಚಂದ್ರ ಎಲ್ಲ ಜ್ಯೋತಿಷಿಗಳಿಗೆ ಬಿಡಿ. ನೀವು ನಿಮ್ಮ ಸಚಿವರು ಅಭಿವೃದ್ಧಿ, ಆಡಳಿತ ಕಡೆ ಗಮನ ಕೊಡಿ. ಸರ್ಕಾರಿ ನೌಕರರಿಗೆ ಸಕಾಲಕ್ಕೆ ವೇತನ ಕೊಡಿ. ನಿಮ್ಮ ಹೋಮ್ ಮಿನಿಸ್ಟರ್ ಗೆ ಬೆಟ್ಟಿಂಗ್ ಬಿಟ್ಟು ಲಾ ಅಂಡ್ ಆರ್ಡರ್ ಕಡೆ ಗಮನೆ ಕೊಡಲು ಹೇಳಿ. ರಸ್ತೆ ಗುಂಡಿ ಸರಿ ಮಾಡಿ. ಕರ್ನಾಟಕ ಸಾಲದಲ್ಲಿ ಮುಳುಗಿದೆ. ಸರ್ಕಾರಿ ನೌಕರರಿಗೆ ವೇತನ ಕೊಡಕ್ಕಾಗ್ತಿಲ್ಲ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೀತಿದೆ. ಬೆಂಗಳೂರಿನಿಂದ ಕಂಪೆನಿಗಳು ಓಡಿ ಹೋಗ್ತಿವೆ. ಇದು ನಿಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್” ಎಂದು ಟೀಕಿಸಿದರು.
Laxmi News 24×7