ತುಮಕೂರು: ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇನ್ನೊಂದೆಡೆ, ಹಳ್ಳ-ಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿದು ಹೋಗುತ್ತಿರುವುದರಿಂದ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಗುಬ್ಬಿ, ತಿಪಟೂರು, ತುರುವೇಕೆರೆ ಸೇರಿದಂತೆ ಇತರೆ ಭಾಗದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಕೆರೆಗಳೆಲ್ಲ ಭರ್ತಿಯಾಗಿದ್ದು, ನೀರು ತುಂಬಿ ಹೊರ ಹೊರಹೋಗುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ.
ನೀರಿನ ರಭಸಕ್ಕೆ ತೇಲಿ ಹೋದ ಕಾರು: ಗುಬ್ಬಿ ತಾಲೂಕಿನ ಭಾಗದಲ್ಲಿ ಹಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಗುಬ್ಬಿಯ ತೋಟಸಾಗರ ಗ್ರಾಮದ ಬಳಿ ಹರಿದು ಹೋಗುತ್ತಿದ್ದ ಮಳೆ ನೀರಿನಲ್ಲಿ ಪರಮೇಶ್ ಎಂಬವರ ಕಾರು ಕೊಚ್ಚಿ ಹೋಗಿದೆ. ತಕ್ಷಣ ಎಚ್ಚೆತ್ತುಕೊಂಡ ಪರಮೇಶ್, ಕಾರಿನಿಂದ ಹೊರ ಜಿಗಿದು ಈಜಿಕೊಂಡು ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಕಾರು ಸುಮಾರು ಒಂದು ಕಿಲೋ ಮೀಟರ್ವರೆಗೂ ನೀರಿನಲ್ಲಿ ತೇಲಿಕೊಂಡು ಹೋಗಿದೆ. ನಂತರ ಸ್ಥಳೀಯರ ಸಹಕಾರದಿಂದ ಕಾರನ್ನು ನೀರಿನಿಂದ ಹೊರತೆಗೆಯಲಾಗಿದೆ.
ತೋಟಗಳಿಗೆ ನುಗ್ಗಿದ ನೀರು: ತಿಪಟೂರು ಹಾಗೂ ಗುಬ್ಬಿ ಭಾಗದ ವಿವಿಧೆಡೆ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರು ತೋಟಗಳಿಗೆ ನುಗ್ಗಿ ಅಡಿಕೆ, ತರಕಾರಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ.
ಕುಣಿಗಲ್ ಹಾಗೂ ಚಿಕ್ಕನಾಯಕನಹಳ್ಳಿ ಭಾಗದಲ್ಲಿಯೂ ಭಾರಿ ಮಳೆ ಆಗಿದ್ದು, ಕೆರೆಗಳಲ್ಲಿ ನೀರು ಸಾಕಾಣಿಕೆ ಮಾಡಲಾಗಿದ್ದ ಮೀನುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮೀನುಗಳನ್ನು ಸಂರಕ್ಷಿಸಲು ಗುತ್ತಿಗೆದಾರರು ಬಲೆಗಳನ್ನು ಹಾಕಿ, ಹರಸಾಹಸ ಪಡುತ್ತಿದ್ದರು.
Laxmi News 24×7