ಮೈಸೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹಿಡಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಕಾರ್ಯಾಚರಣೆಗೆ ಹೆದರಿದ ಕಿಡಿಗೇಡಿಗಳು, ವಾಹನವನ್ನು ವೇಗವಾಗಿ ಓಡಿಸಿದ ಪರಿಣಾಮ ಉರುಳಿ ಬಿದ್ದಿದೆ. ವಾಹನವನ್ನು ಸೀಜ್ ಮಾಡಿದ ಪೊಲೀಸರು 20 ಕರುಗಳನ್ನು ರಕ್ಷಿಸಿದ್ದಾರೆ.
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಜಯಪುರ ಪೊಲೀಸರಿಗೆ ಮಾಹಿತಿ ಬಂದಿತ್ತು. ಪಿಎಸ್ಐ ಹೇಮಾವತಿ ಅವರು ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಚೇಸ್ ಮಾಡಿದ್ದಾರೆ. ಪೊಲೀಸರು ತಮ್ಮನ್ನು ಬೆನ್ನಟ್ಟುತ್ತಿರುವ ಮಾಹಿತಿ ಪಡೆದ ಆರೋಪಿಗಳು, ಅತಿವೇಗದಿಂದ ಚಾಲನೆ ಮಾಡುತ್ತಿದ್ದ ತಮ್ಮ ವಾಹನವನ್ನು ಹುಲ್ಲಹಳ್ಳಿ ರಸ್ತೆಯತ್ತ ತಿರುಗಿಸಿದ್ದಾರೆ. ಕೂಡಲೇ ಹೇಮಾವತಿ ಅವರು ಹುಲ್ಲಹಳ್ಳಿ ಪಿಎಸ್ಐ ಚೇತನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಚೇತನ್ ಕುಮಾರ್ ಅವರು ತಮ್ಮ ಸಿಬ್ಬಂದಿ ಸಮೇತ ಜಾನುವಾರು ಸಾಗಿಸುತ್ತಿದ್ದ ವಾಹನ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಪೊಲೀಸರ ಚೇಸ್ಗೆ ಬೆದರಿದ ಕಿಡಿಗೇಡಿಗಳು ವಾಹನವನ್ನು ಮತ್ತಷ್ಟು ವೇಗವಾಗಿ ಓಡಿಸಿದ್ದಾರೆ. ಆದರೆ, ಅಹಲ್ಯಾ ಗ್ರಾಮದ ಬಳಿ ವಾಹನ ಪಲ್ಟಿಯಾಗಿದ್ದು, ಚಾಲಕ ಸೇರಿದಂತೆ ವಾಹನದಲ್ಲಿದ್ದ ಇತರರು ಪರಾರಿಯಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಾಗ ಕರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳೀಯರ ಸಹಾಯದಿಂದ ಕರುಗಳನ್ನು ರಕ್ಷಿಸಿ ಪಿಂಜರಾಪೋಲ್ಗೆ ರವಾನಿಸಿದ್ದಾರೆ. ಬೊಲೆರೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹುಲ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7